ಮತ್ತೊಂದು ಸಿಡಿಲಬ್ಬರದ ಶತಕ ಸಿಡಿಸಿದ ಚೇತೇಶ್ವರ ಪೂಜಾರ! ಕಳೆದ 5 ಇನ್ನಿಂಗ್ಸ್‌ಗಳಲ್ಲಿ 3 ಶತಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್
‘ಟೆಸ್ಟ್ ಸ್ಪೆಷಲಿಸ್ಟ್’ ಎಂಬ ಟ್ಯಾಗ್ ಹೊತ್ತಿದ್ದ ಕ್ರಿಕೆಟಿಗ ಚೇತೇಶ್ವರ ಪೂಜಾರ ಆಟದ ಶೈಲಿ ಈಗ ಸಂಪೂರ್ಣವಾಗಿ ಬದಲಾಗಿದೆ. ಅವರ ಸ್ಫೋಟಕ ಆಟಕ್ಕೆ ಬೌಲರ್‌ ಗಳು ಪತರಗುಟ್ಟುತ್ತಿದ್ದಾರೆ. ಪ್ರಸ್ತುತ ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ ನ ರಾಯಲ್ ಲಂಡನ್ ಕಪ್ ಏಕದಿನ ಚಾಂಪಿಯನ್‌ಶಿಪ್‌ನಲ್ಲಿ ಅಬ್ಬರಿಸುತ್ತಿರುವ ಪೂಜಾರ ಟೂರ್ನಿಯಲ್ಲಿ ಮತ್ತೊಂದು ಸಿಡಿಲಬ್ಬರದ ಶತಕವನ್ನು ಸಿಡಿಸಿದ್ದಾರೆ. ಕಳೆದ ಐದು ಇನ್ನಿಂಗ್ಸ್‌ಗಳಲ್ಲಿ ಇದು ಅವರ ಮೂರನೇ ಶತಕವಾಗಿದೆ. ಜತೆಗೆ ಪೂಜಾರ ತನ್ನ ನಾಯಕತ್ವದಲ್ಲಿ ಸಸೆಕ್ಸ್‌ ತಂಡವನ್ನು ಸೆಮಿಫೈನಲ್‌ ಹಂತಕ್ಕೆ ಕೊಂಡೊಯ್ದಿದ್ದಾರೆ.
ಸಸೆಕ್ಸ್ ಪರ ಭರ್ಜರಿ ಫಾರ್ಮ್ ಮುಂದುವರಿಸಿದ ಪೂಜಾರ ಮಿಡ್ಲ್‌ಸೆಕ್ಸ್ ವಿರುದ್ಧ ಕೇವಲ 90 ಎಸೆತಗಳಲ್ಲಿ 132 ರನ್ ಸಿಡಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಪೂಜಾರ ಆರಂಭಿಕ ಆಟಗಾರ ಟಾಮ್ ಅಲ್ಸೋಪ್ ಅವರೊಂದಿಗೆ 166 ಎಸೆತಗಳಲ್ಲಿ 238 ರನ್‌ಗಳ ಪಾರ್ಟ್‌ನರ್‌ ಶಿಪ್‌ ನಡೆಸಿದರು. 20 ಬೌಂಡರಿ ಮತ್ತು ಎರಡು ಭರ್ಜರಿ ಸಿಕ್ಸರ್‌ ಗಳಿದ್ದ 132 ರನ್ ಗಳಿಸಿ ಪೂಜಾರ ಔಟಾದರೆ, ಅಲ್ಸೋಪ್ 155 ಎಸೆತಗಳಲ್ಲಿ ಅಜೇಯ 189 ರನ್ ಗಳಿಸಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ನಿಧಾನಗತಿಯ ಬ್ಯಾಟಿಂಗ್ ಶೈಲಿಗೆ ಟೀಕೆಗೆ ಒಳಗಾಗಿರುವ ಪೂಜಾರ ತಾನೀಗ ಏಕದಿನ, ಟಿ20 ಕ್ರಿಕೆಟ್‌ ಗೂ ಸಿದ್ಧನಾಗಿದ್ದೇನೆ ಎಂಬದನ್ನು ನಿರೂಪಿಸುತ್ತಿದ್ದಾರೆ. ಪೂಜಾರ ಪರಾಕ್ರಮದಿಂದ ಸಸೆಕ್ಸ್ ತಂಡವು ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್‌ಗೆ 400 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಗುರಿ ಬೆನ್ನತ್ತಿದ ಮಿಡ್ಲ್​ಸೆಕ್ಸ್ ತಂಡವು ಕೇವಲ 243 ರನ್​ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ 157 ರನ್​ಗಳ ಭಾರೀ ಜಯ ಸಾಧಿಸಿದ ಸಸೆಕ್ಸ್ ತಂಡವು ರಾಯಲ್ ಲಂಡನ್​ ಕಪ್​ನಲ್ಲಿ ಸೆಮಿಫೈನಲ್ ಹಂತಕ್ಕೆ ಏರಿದೆ.
2022 ರ ರಾಯಲ್ ಲಂಡನ್ ಕಪ್‌ನಲ್ಲಿ ಆಡಿದ ಎಂಟು ಇನ್ನಿಂಗ್ಸ್‌ಗಳಲ್ಲಿ, ಪೂಜಾರ ಮೂರು ಶತಕ ಮತ್ತು ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅವರು ಡರ್ಹಾಮ್ ವಿರುದ್ಧ ಅಜೇಯ 49 ರನ್ ಗಳಿಸಿದರು. 34 ವರ್ಷದ ಬ್ಯಾಟರ್ 116 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 8 ಪಂದ್ಯಗಳಲ್ಲಿ 616 ರನ್‌ಗಳನ್ನು ಕಲೆಹಾಕಿದ್ದಾರೆ.
ತಿಂಗಳ ಆರಂಭದಲ್ಲಿ, ವಾರ್ವಿಕ್‌ಷೈರ್ ವಿರುದ್ಧ ಕೇವಲ 79 ಎಸೆತಗಳಲ್ಲಿ 107 ರನ್ ಗಳಿಸಿದ್ದರು. ಅದಕ್ಕೂ ಮೊದಲು, ಸರ್ರೆ ವಿರುದ್ಧ ಕೇವಲ 131 ಎಸೆತಗಳಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಸ್ಕೋರ್  ಆದ 174 ಸಿಡಿಸಿದ್ದರು. ಕೌಂಟಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಮಿಂಚಿದ್ದ ಪೂಜಾರ ಎರಡು ಶತಕ ಹಾಗೂ ಮೂರು ದ್ವಿಶತಕಗಳನ್ನು ಸಿಡಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!