ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ ಗಢದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಇದೇ ವೇಳೆ ಧಮ್ತಾರಿಯಲ್ಲಿ ನಕ್ಸಲರು ಐಇಡಿ ಸ್ಫೋಟಿಸಿರುವ ಘಟನೆ ಇಂದು ನಡೆದಿದೆ.
ನಕ್ಸಲರು ಐಇಡಿ ಸ್ಫೋಟಿಸಿದ ವೇಳೆ ಇಬ್ಬರು ಸಿಆರ್ ಪಿಎಫ್ ಯೋಧರು ಬೈಕ್ ನಲ್ಲಿ ತೆರಳುತ್ತಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿಯಾಗಿದೆ.
90 ಸದಸ್ಯರ ಬಲದ ಛತ್ತೀಸ್‌ಗಢ ವಿಧಾನಸಭೆಯ ಎರಡನೇ ಮತ್ತು ಅಂತಿಮ ಹಂತದ ಚುನಾವಣೆ ಇಂದು ನಡೆಯುತ್ತಿದ್ದು, 70 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇಂದಿನ ಮತದಾನದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಡಿಸಿಎಂ ಟಿಎಸ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ಅರುಣ್ ಸಾವೋ ಸೇರಿದಂತೆ ಅನೇಕ ಪ್ರಮುಖ ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಈ ಹಂತದಲ್ಲಿ ನಿರ್ಧಾರವಾಗಲಿದೆ.
ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 5ಗಂಟೆವರೆಗೆ ಮತದಾನ ನಡೆಯಲಿದೆ. ಅಂತಿಮ ಹಂತದ ಮತದಾನದಲ್ಲಿ 18,800 ಮತಗಟ್ಟೆಗಳಿದ್ದು, ಇದರಲ್ಲಿ ಒಂಬತ್ತು ಮತಗಟ್ಟೆಗಳಲ್ಲಿ ಭದ್ರತಾ ದೃಷ್ಟಿಯಿಂದ ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ರವರೆಗೆ ಮತದಾನ ನಡೆಯಲಿದೆ.