ಬೆಂಗಳೂರಿನ ಮಳೆ ಗೋಳಿಗೆ ಮುಖ್ಯಮಂತ್ರಿ ಕೊಟ್ಟ ಕಾರಣಗಳು- ಲೆಕ್ಕ ಮೀರಿದ ಮಳೆ, ಬೆಂಗಳೂರಿನ ತೀವ್ರ ಬೆಳವಣಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವರುಣನ ಅಬ್ಬರಕ್ಕೆ ಜನಜೀವನ ತತ್ತರಿಸಿಹೋಗಿದೆ. ಅದರಲ್ಲೂ ಮಂಗಳವಾರ ಸುರಿದ ಭಾರೀ ಮಳೆಗೆ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶ ಗಳಿಗೆ ನೀರು ನುಗ್ಗಿದ್ದು, ಮನೆ, ರಸ್ತೆ, ಸೇತುವೆಗಳಲ್ಲಿ ನೀರು ನಿಂತಿದೆ. ಮಳೆಯಿಂದಾಗಿ ತೊಂದರೆಗೊಳಗಾದ ಜನವಸತಿ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಜೆಸಿನಗರ, ನಾಗವಾರ ಮೆಟ್ರೋ ಸ್ಟೇಷನ್‌, ಹೆಚ್‌ಪಿಆರ್‌ ಲೇಔಟ್‌, ಹೆಬ್ಬಾಳ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅತ್ಯಲ್ಪಾವಧಿಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದೆ. ಕಳೆದ 30-40 ವರ್ಷಗಳಲ್ಲಿ ಇಷ್ಟೊಂದು ಕಿರು ಅವಧಿಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದ ಉದಾಹರಣೆಗಳಿಲ್ಲ. ಮೇ ತಿಂಗಳ 15 ದಿನಗಳ ಅವಧಿಯಲ್ಲಿ ಆಗಬೇಕಿದ್ದ  ಮಳೆ ಕೇವಲ ನಾಲೈದು ತಾಸುಗಳಲ್ಲಿ ಸುರಿದಿದೆ. ಕೆಲವಡೆ 100 ರಿಂದ 120 ಎಂಎಂ ನಷ್ಟು ಮಳೆ ಅಬ್ಬರಿಸಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ನೀರು ಬ್ಲಾಕ್‌ ಆಗಿ ತಗ್ಗುಪ್ರದೇಶಗಳು ನೀರಿನಿಂದಾವೃತವಾಗಿವೆ. ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಶಕಗಳಿಂದ ಪ್ರವಾಹ ಸಮಸ್ಯೆಗಳೆದುರಾಗುತ್ತಿದೆ. ಈ ಸಮಸ್ಯೆಗಳಿಗೆ ಹಿಂದಿನ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಬೆಂಗಳೂರಿನ ತೀವ್ರ ಬೆಳವಣಿಗೆಯ ದೆಸೆಯಿಂದಾಗಿ ಯಾವ ಯೋಜನೆಯೂ ಫಲಪ್ರದವಾಗಿಲ್ಲ. ಆದ್ದರಿಂದ ಈ ದಶಕಗಳಿಂದ ಕಾಡುತ್ತಿರುವ ಸಮಸ್ಯೆಯನ್ನು ಪರಿಹರಿಸಲು ವಿಪಕ್ಷದವರೂ ಸೇರಿದಂತೆ ಹಲವು ಶಾಸಕರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ” ಎಂದರು.
“ಬೆಂಗಳೂರಿನ ಪ್ರಮುಖ ತಗ್ಗು ಪ್ರದೇಶಗಳಲ್ಲಿ ಮೊದಲು ಡ್ರೈನೇಜ್‌ ಸಮಸ್ಯೆ ಪರಿಹರಿಸಲು ನಿರ್ಧಾರಿಸಲಾಗಿದ್ದು ಈಗಾಗಲೇ ಅದಕ್ಕೆ ಯೋಜನಾ ವರದಿ ಸಿದ್ಧವಾಗಿದೆ. ಈ ಯೋಜನೆಗೆ ಮೊದಲ ಹಂತದಲ್ಲಿ 1,600 ಕೋಟಿ ರೂ ಬಿಡುಗಡೆ ಮಾಡಲಾಗುವುದು. ಹಾನಿಗೊಳಗಾಗಿರುವ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು 400 ಕೋಟಿ ರು. ಬಿಡುಗಡೆಗೆ ಅನುಮತಿ ನೀಡಲಾಗಿದೆ.
ಇನ್ನು ತೆರೆದ ಪ್ರದೇಶಗಳನ್ನು ಸರಿಯಾಗಿ ಮುಚ್ಚಲು, ಹಾಗೂ ಒಡೆದು ಹೋಗಿರುವ ನೀರಿನ ನಾಲೆಗಳನ್ನು ಸರಿ ಪಡಿಸಲು ಕೂಡ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವಂತೆ ಯೋಜನೆ ಸಿದ್ಧಪಡಿಸಲಾಗಿದ್ದು ಹಂತ ಹಂತವಾಗಿ ಯೋಜನೆ ಜಾರಿಯಾಗಲಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!