ಅಮೆರಿಕ ವಾಯುಪ್ರದೇಶದ ಮೇಲೆ ಸ್ಪೈ ಬಲೂನ್ ಹಾರಾಟ: ಸಚಿವ ಬ್ಲಿಂಕೆನ್ ಚೀನಾ ಭೇಟಿ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕದ ಮೊಂಟಾನಾ ಸೇರಿದಂತೆ ಸೂಕ್ಷ್ಮ ಪ್ರದೇಶಗಳ ಮೇಲೆ ಚೀನಾದ ಶಂಕಿತ ಪತ್ತೇದಾರಿ ಬಲೂನ್ ಹಾರುತ್ತಿದೆ ಎಂದು ಅಮೆರಿಕ ಸರ್ಕಾರ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಅವರು ತಮ್ಮ ಚೀನಾ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಪತ್ತೇದಾರಿ ಬಲೂನ್ ಅನ್ನು ಉತ್ತರ ಅಮೆರಿಕದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ (NORAD) ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಈ ಬಲೂನಿನ ಗಾತ್ರ ತುಂಬಾ ದೊಡ್ಡದಾಗಿದ್ದು, ಈ ಪತ್ತೇದಾರಿ ಬಲೂನ್‌ನಿಂದ ಸಾರ್ವಜನಿಕರಿಗೆ ಯಾವುದೇ ಅಪಾಯವಿಲ್ಲ ಎಂದು ನೋರಾಡ್ ತಿಳಿಸಿದೆ. ಮೊದಲಿಗೆ ಈ ಬಲೂನ್ ನಾಶಪಡಿಸಲು ಅಮೆರಿಕ ಯೋಚಿಸಿತ್ತು. ಆದರೆ, ಬಲೂನಿನ ಅವಶೇಷಗಳಿಂದ ಜನರಿಗೆ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಗಳು ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರಿಗೆ ಸೂಚಿಸಿದ್ದಾರೆ.

ಸುದೀರ್ಘ ಸಮಯದ ಬಳಿಕ ಅಮೆರಿಕದ ವಾಯುಪ್ರದೇಶದಲ್ಲಿ ಚೀನಾದ ಬೇಹುಗಾರಿಕಾ ಬಲೂನ್ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ತೈವಾನ್ ಸಮಸ್ಯೆಯಿಂದಾಗಿ ಕಳೆದ ವರ್ಷ ಚೀನಾ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಉಂಟಾಗಿತ್ತು. ತೈವಾನ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಮಿಲಿಟರಿ ಚಟುವಟಿಕೆಗಳನ್ನು ಅಮೆರಿಕ ಖಂಡಿಸುತ್ತದೆ. ಇದರಿಂದಾಗಿ ಈ ಎರಡೂ ದೇಶಗಳ ನಡುವೆ ಉದ್ವಿಗ್ನ ವಾತಾವರಣ ಮುಂದುವರಿದಿದೆ.

ಚೀನಾದ ಬೇಹುಗಾರಿಕಾ ಬಲೂನ್ ಅಮೆರಿಕದ ವಾಯುಪ್ರದೇಶದ ಮೇಲೆ ಹಾರುತ್ತಿರುವುದು ಉಭಯ ದೇಶಗಳ ನಡುವೆ ಉದ್ವಿಗ್ನತೆಯನ್ನು ಸೃಷ್ಟಿಸಿದೆ. ಇದೀಗ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಅವರು ತಮ್ಮ ಚೀನಾ ಭೇಟಿಯನ್ನು ರದ್ದುಗೊಳಿಸಿದ್ದಾರೆ.

ಪತ್ತೇದಾರಿ ಬಲೂನ್ ಪ್ರಕರಣಕ್ಕೆ ಚೀನಾ ಪ್ರತಿಕ್ರಿಯಿಸಿದೆ. ಈ ವಿಚಾರದಲ್ಲಿ ಅಮೆರಿಕ ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ವಿಂಗ್ ಹೇಳಿದ್ದಾರೆ. ಎರಡೂ ದೇಶಗಳ ಸಾರ್ವಭೌಮತ್ವ ಮತ್ತು ವಾಯುಪ್ರದೇಶದ ನಿಯಮಗಳನ್ನು ಚೀನಾ ಉಲ್ಲಂಘಿಸಿಲ್ಲ. ಎರಡೂ ದೇಶಗಳು ಈ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಬಹುದು ಎಂದು ಹೇಳಿದರು. ಚೀನಾ ಜವಾಬ್ದಾರಿಯುತ ರಾಷ್ಟ್ರವಾಗಿದ್ದು, ಅದು ಯಾವಾಗಲೂ ಅಂತಾರಾಷ್ಟ್ರೀಯ ಕಾನೂನುಗಳನ್ನು ಅನುಸರಿಸುತ್ತದೆ ಎಂದರು. ಈ ಬಲೂನ್ ನಿಂದ ಯಾರಿಗೂ ತೊಂದರೆ ಆಗುವುದಿಲ್ಲ ಇದು ಹವಾಮಾನ ಸಂಶೋಧನೆಗಾಗಿ ಮತ್ತು ಬಲವಾದ ಗಾಳಿಯಿಂದಾಗಿ ಮಾರ್ಗ ಬದಲಾವಣೆಯಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!