Saturday, June 25, 2022

Latest Posts

ಚಿತ್ರದುರ್ಗ ಮುರುಘಾ ಮಠಕ್ಕೆ ಉತ್ತರಾಧಿಕಾರಿ ನೇಮಕ

ಹೊಸ ದಿಗಂತ ವರದಿ, ಚಿತ್ರದುರ್ಗ:

ಚಿತ್ರದುರ್ಗದ ಐತಿಹಾಸಿಕ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಪೀಠಾಧಿಪತಿಗಳಾದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ತಮ್ಮ ಉತ್ತರಾಧಿಕಾರಿಯನ್ನಾಗಿ ಶ್ರೀ ಬಸವಾದಿತ್ಯ ದೇವರು ಅವರನ್ನು ನೇಮಕ ಮಾಡಿದ್ದಾರೆ.
ಶ್ರೀಮಠದ ಶಿರಸಂಗಿ ಮಹಾಲಿಂಗಸ್ವಾಮಿ ಸಭಾಂಗಣದಲ್ಲಿ ನಡೆದ ಶರಣ ಸಭೆಯಲ್ಲಿ ಭಾಗವಹಿಸಿದ್ದ ಭಕ್ತರ ಹಾಗೂ ವಿವಿಧ ಸಮುದಾಯದ ಮಖಂಡರ ಸಮ್ಮುಖದಲ್ಲಿ ಈ ತೀರ್ಮಾನವನ್ನು ಶ್ರೀಗಳು ಪ್ರಕಟಿಸಿದರು.
ನಮ್ಮನ್ನು ಸೇರಿ ೨೦ ಪೀಠಾಧಿಪತಿಗಳು ಶ್ರೀಮಠವನ್ನು ಮುನ್ನಡೆಸಿದ್ದಾರೆ. ಆಕಸ್ಮಿಕವಾಗಿ ಹಾಗೂ ಅನಿರೀಕ್ಷಿತವಾಗಿ ಸಂಭವಿಸುವ ಘಟನೆಗಳಿಂದ ಮಠ-ಪೀಠಗಳಲ್ಲಿ ಶೂನ್ಯ ನಿರ್ಮಾಣವಾಗಬಾರದು ಎಂಬ ಕಾರಣಕ್ಕೆ ಉತ್ತರಾಧಿಕಾರಿ ನೇಮಕ ಮಾಡಲಾಗಿದೆ ಎಂದರು.
ಚಿತ್ರದುರ್ಗ ತಾಲ್ಲೂಕು ಹುಲ್ಲೂರು ಗ್ರಾಮದ ಶ್ರೀಮತಿ ಚಂದ್ರಕಲಾ ಮತ್ತು ಶಿವಮೂರ್ತಯ್ಯ ದಂಪತಿಯ ಪುತ್ರ ಬಸವಾದಿತ್ಯ ಅವರು ಶ್ರೀಮಠದ ಗುರುಕುಲದಲ್ಲಿದ್ದುಕೊಂಡು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಬಲ್ಲವರಾಗಿದ್ದು, ಉನ್ನತ ವ್ಯಾಸಂಗ ಮಾಡಿಸಿ ಪಟ್ಟ ಕಟ್ಟಲಾಗುವುದು ಎಂದು ಶ್ರೀಗಳು ಹೇಳಿದರು.
ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಶರಣಸಭೆ ಮಾಡುತ್ತ ಬರಲಾಗಿದೆ. ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ಎಂದರೆ ಸಂವಾದ. ಶರಣ ಸಭೆ ಸಂಘಟನೆ ಮಾಡುತ್ತ ಬಂದಿದೆ. ಸಂಘಟನೆ, ಸಮಾಲೋಚನೆ ಸಂವರ್ಧನ ಇವು ಮೂರು ಸಭೆಯ ಉzಶಗಳು. ಇದ್ದು ಇಲ್ಲದಂತಿರುವುದು ಎದ್ದು ಕಾಣಿಸಿಕೊಳ್ಳಬಾರದು ಎಂದರು.
ಅನುಭವ ಮಂಟಪದ ಪರಿಕಲ್ಪನೆ ಎಂದರೆ ಪ್ರಜಾಸತ್ತಾತ್ಮಕವಾದ ಪರಿಕಲ್ಪನೆ. ಇಲ್ಲಿ ಸ್ವಹಿತಾಸಕ್ತಿ ಇರುವುದಿಲ್ಲ. ಪಟ್ಟಭದ್ರ ಹಿತಾಸಕ್ತಿ ಇರುವುದಿಲ್ಲ. ಶ್ರೀಮಠಕ್ಕೆ ಸರ್ವ ಸಮಾಜದವರನ್ನು ಒಳಗೊಂಡ ಸಲಹಾ ಸಮಿತಿಯೊಂದನ್ನು ಮಾಡಲಿzವೆ ಎಂದು ಶ್ರೀಗಳು ತಿಳಿಸಿದರು.
ಬೆಂಗಳೂರಿನ ದ.ಸಂ.ಸ. ಮುಖಂಡ ವೆಂಕಟಸ್ವಾಮಿ, ಸಿಂದಗಿ ಬಸವಕೇಂದ್ರದ ನಾನಾಗೌಡ ಪಾಟೀಲ, ಧಾರವಾಡ ಬಸವಕೇಂದ್ರದ ಈಶ್ವರ ಸಾಣಿಕೊಪ್ಪ, ಚಿತ್ರದುರ್ಗ ವೀರಶೈವ ಸಮಾಜದ ಜಿತೇಂದ್ರ ಹುಲಿಕುಂಟೆ, ಚನ್ನಗಿರಿ ಉಮಾಪತಿ, ಭಾಲ್ಕಿ ಬಸವಕೇಂದ್ರದ ಅಧ್ಯಕ್ಷ ಕಿರಣ್‌ಕುಮಾರ್ ಖಂಡ್ರೆ ಮೊದಲಾದವರು ಮಾತನಾಡಿದರು.
ಇಳಕಲ್‌ನ ಶ್ರೀ ಗುರುಮಹಾಂತ ಸ್ವಾಮಿಗಳು, ಅಥಣಿಯ ಶ್ರೀ ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮಿಗಳು, ಹೆಬ್ಬಾಳು ವಿರಕ್ತಮಠದ ಶ್ರೀ ಮಹಂತ ರುದ್ರೇಶ್ವರ ಸ್ವಾಮಿಗಳು, ಗುರುಮಠಕಲ್‌ನ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳು, ಬ್ಯಾಡಗಿ ಮುಪ್ಪಿನಸ್ವಾಮಿ ವಿರಕ್ತಮಠದ ಶ್ರೀ ಚೆನ್ನಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಡಾ. ಬಸವಕುಮಾರ ಸ್ವಾಮಿಗಳು, ಶ್ರೀ ಶಿದ್ದರಹಳ್ಳಿ ಪಾರಮಾರ್ಥ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ತಿಳುವಳ್ಳಿಯ ಶ್ರೀ ಬಸವನಿರಂಜನ ಸ್ವಾಮಿಗಳು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss