October 10, 2026
Saturday, October 10, 2026
spot_img

CINE | ‘ದಿ ಕೇರಳ ಸ್ಟೋರಿ 2’ ರಿಲೀಸ್‌ಗೆ ಗ್ರೀನ್ ಸಿಗ್ನಲ್: ಹೈಕೋರ್ಟ್‌ನಿಂದ ನಿರ್ಮಾಪಕರಿಗೆ ಬಿಗ್ ರಿಲೀಫ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿವಾದ ಮತ್ತು ಕುತೂಹಲಗಳ ಕೇಂದ್ರಬಿಂದುವಾಗಿರುವ ‘ದಿ ಕೇರಳ ಸ್ಟೋರಿ 2-ಗೋಸ್ ಬಿಯಾಂಡ್’ ಚಿತ್ರದ ಬಿಡುಗಡೆಗೆ ಎದುರಾಗಿದ್ದ ಕಾನೂನು ಸಂಕೋಲೆಗಳು ಸಡಿಲಗೊಂಡಿವೆ. ಚಿತ್ರದ ಪ್ರದರ್ಶನದ ಮೇಲೆ ಹೇರಲಾಗಿದ್ದ ತಡೆಯಾಜ್ಞೆಯನ್ನು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ರದ್ದುಗೊಳಿಸುವ ಮೂಲಕ ನಿರ್ಮಾಪಕರಿಗೆ ದೊಡ್ಡ ಮಟ್ಟದ ಸಮಾಧಾನ ತಂದಿದೆ.

ಈ ಹಿಂದೆ ಚಿತ್ರದ ಸೆನ್ಸಾರ್ ಪ್ರಮಾಣೀಕರಣವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠವು, ಚಿತ್ರದ ಬಿಡುಗಡೆಗೆ 15 ದಿನಗಳ ಕಾಲ ಮಧ್ಯಂತರ ತಡೆ ನೀಡಿತ್ತು. ಅಲ್ಲದೆ, ಈ ಕುರಿತು ಸಿಬಿಎಫ್‌ಸಿ (CBFC) ಅಧ್ಯಕ್ಷರು ಮರುಪರಿಶೀಲನೆ ನಡೆಸಬೇಕೆಂದು ಸೂಚಿಸಿತ್ತು.

ಏಕಸದಸ್ಯ ಪೀಠದ ಈ ಆದೇಶವನ್ನು ಪ್ರಶ್ನಿಸಿ ನಿರ್ಮಾಪಕರು ತಕ್ಷಣವೇ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಮತ್ತು ಪಿ.ವಿ. ಬಾಲಕೃಷ್ಣನ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಶುಕ್ರವಾರ ರಾತ್ರಿ 7:30ಕ್ಕೆ ತುರ್ತು ವಿಚಾರಣೆ ನಡೆಸಿತು.

ಹಿರಿಯ ವಕೀಲರಾದ ಎಲ್ವಿನ್ ಪೀಟರ್ ಮತ್ತು ನೀರಜ್ ಕಿಶನ್ ಕೌಲ್ ಅವರು ಚಿತ್ರದ ಪರವಾಗಿ ಸಮರ್ಥ ವಾದ ಮಂಡಿಸಿದರು. ವಕೀಲರಾದ ಮೈತ್ರೇಯಿ ಹೆಗ್ಡೆ ಮತ್ತು ಶ್ರೀರಾಗ್ ಶೈಲನ್ ಅವರು ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದರು.

ಉಭಯ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು, ಕೆಳಹಂತದ ಪೀಠ ನೀಡಿದ್ದ ತಡೆಯಾಜ್ಞೆ ಆದೇಶಕ್ಕೆ ತಡೆ ನೀಡಿದೆ. ಈ ಮೂಲಕ ‘ದಿ ಕೇರಳ ಸ್ಟೋರಿ 2’ ಯಾವುದೇ ಅಡೆತಡೆಯಿಲ್ಲದೆ ರಾಜ್ಯಾದ್ಯಂತ ತೆರೆಕಾಣಲು ಕಾನೂನುಬದ್ಧ ಅನುಮತಿ ಸಿಕ್ಕಂತಾಗಿದೆ.

Must Read