ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಪೆದ್ದಿ’ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ ಈ ಸ್ಪೋರ್ಟ್ಸ್ ಆ್ಯಕ್ಷನ್ ಡ್ರಾಮಾ ಸಿನಿಮಾದ ಭರ್ಜರಿ ಪ್ರಚಾರ ಕಾರ್ಯಕ್ರಮವನ್ನು ಸೋಮವಾರ (ಜೂನ್ 1) ಆಂಧ್ರಪ್ರದೇಶದ ವಿಜಯವಾಡದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ, ಈ ಅದ್ಧೂರಿ ಈವೆಂಟ್‌ನಲ್ಲಿ ನಡೆದ ಒಂದು ಅನಿರೀಕ್ಷಿತ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವೇದಿಕೆ ಮೇಲೆ ಜಾನ್ವಿ ಕಪೂರ್ ಬೆಚ್ಚಿಬಿದ್ದಿದ್ದು ಏಕೆ?
ಕಾರ್ಯಕ್ರಮ ನಡೆಯುತ್ತಿದ್ದಾಗ ನಟ ರಾಮ್ ಚರಣ್, ನಾಯಕಿ ಜಾನ್ವಿ ಕಪೂರ್ ಹಾಗೂ ನಿರ್ದೇಶಕ ಬುಚ್ಚಿ ಬಾಬು ಸನಾ ವೇದಿಕೆಯ ಮೇಲಿದ್ದರು. ಈ ವೇಳೆ ಭದ್ರತಾ ವಲಯವನ್ನು ಸೀಳಿಕೊಂಡು ಬಂದ ಅಭಿಮಾನಿಯೊಬ್ಬ ಏಕಾಏಕಿ ಸ್ಟೇಜ್ ಕಡೆಗೆ ನುಗ್ಗಿದ್ದಾನೆ. ರಾಮ್ ಚರಣ್ ಅವರಂತೆಯೇ ಹೇರ್‌ಸ್ಟೈಲ್ ಮಾಡಿಕೊಂಡಿದ್ದ ಆತ, ವೇದಿಕೆಯ ಮೇಲೆ ನಟನತ್ತ ರಭಸದಿಂದ ಓಡಿ ಬಂದಿದ್ದಾನೆ. ಇದನ್ನು ಗಮನಿಸದ ಜಾನ್ವಿ ಕಪೂರ್, ಅಭಿಮಾನಿ ನುಗ್ಗಿ ಬಂದ ವೇಗಕ್ಕೆ ಒಂದು ಕ್ಷಣ ತೀವ್ರವಾಗಿ ಬೆಚ್ಚಿಬಿದ್ದಿದ್ದಾರೆ. ಅವರ ಮುಖದಲ್ಲಿನ ಭಯದ ಹಾವಭಾವ ನೆಟ್ಟಿಗರ ಗಮನ ಸೆಳೆದಿದೆ.
ಬಾಡಿಗಾರ್ಡ್ ಕೆವಿನ್ ಕುಂಟ ಸಮಯಪ್ರಜ್ಞೆಗೆ ಮೆಚ್ಚುಗೆ
ಅಭಿಮಾನಿ ವೇದಿಕೆಗೆ ನುಗ್ಗುತ್ತಿದ್ದಂತೆ ಅಲರ್ಟ್ ಆದ ರಾಮ್ ಚರಣ್ ಅವರ ಪರ್ಸನಲ್ ಬಾಡಿಗಾರ್ಡ್ ಹಾಗೂ ಇಂಟರ್ನ್ಯಾಷನಲ್ ಎಂಎಂಎ ಫೈಟರ್ ಕೆವಿನ್ ಕುಂಟ, ತಕ್ಷಣ ಆತನನ್ನು ಹಿಡಿದು ಹಿಂದಕ್ಕೆ ಎಳೆದಿದ್ದಾರೆ. ಈ ವೇಳೆ ವೇದಿಕೆಯ ಮೇಲೆ ಕೆಲಕಾಲ ಗೊಂದಲ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಪರಿಸ್ಥಿತಿ ತಿಳಿಯಾದ ನಂತರ, ರಾಮ್ ಚರಣ್ ಆ ಅಭಿಮಾನಿಯನ್ನು ಹತ್ತಿರಕ್ಕೆ ಕರೆದು ಮಾತನಾಡಿಸಿದ್ದಾರೆ. ಆತ ರಾಮ್ ಚರಣ್ ಕಾಲಿಗೆ ಬಿದ್ದು ಕೃತಜ್ಞತೆ ಸಲ್ಲಿಸಿರುವ ಮತ್ತೊಂದು ವಿಡಿಯೋ ಕೂಡ ಮುನ್ನೆಲೆಗೆ ಬಂದಿದೆ. ಇಷ್ಟು ದೊಡ್ಡ ಜನಸಂದಣಿಯಲ್ಲಿ ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸಿದ ಬಾಡಿಗಾರ್ಡ್ ಕೆವಿನ್ ಕುಂಟ ಅವರ ಸಮಯಪ್ರಜ್ಞೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ರಾಮ್ ಚರಣ್ ಹಾಸ್ಯದ ಚಟಾಕಿ:
ಇತ್ತೀಚಿನ ಸಂದರ್ಶನವೊಂದರಲ್ಲಿ ರಾಮ್ ಚರಣ್ ತಮ್ಮ ಬಾಡಿಗಾರ್ಡ್ ಕೆವಿನ್ ಸ್ಟಾರ್ ಆಗುತ್ತಿರುವ ಬಗ್ಗೆ ತಮಾಷೆಯಾಗಿ ಮಾತನಾಡಿದ್ದರು. “ನೀವೆಲ್ಲರೂ ಸೇರಿ ಅವನನ್ನು ಭಾರಿ ಫೇಮಸ್ ಮಾಡಿದ್ದೀರಿ. ಅದಕ್ಕೇ ನಾನು ಈಗ ಅವನನ್ನು ಜಾಸ್ತಿ ಹೊರಗಡೆ ಬಿಡುತ್ತಿಲ್ಲ. ಯಾರಾದರೂ ಅವನಿಗೆ ಚಾಕೊಲೇಟ್ ಅಥವಾ ಬಿಸ್ಕೆಟ್ ಆಮಿಷ ಒಡ್ಡಿ ನನ್ನ ರಹಸ್ಯಗಳನ್ನು ತಿಳಿದುಕೊಳ್ಳಬಹುದು!” ಎಂದು ಹಾಸ್ಯ ಮಾಡಿದ್ದರು.



