May 29, 2026
Friday, May 29, 2026
spot_img

CINE | ಸಾಯಿ ಪಲ್ಲವಿ ದೇಶದ ನಂ.1 ನಟಿ.. ಮಗನ ಸಿನಿಮಾ ನೋಡಿ ಕಣ್ಣೀರಿಟ್ಟ ‘ಮಿಸ್ಟರ್ ಪರ್ಫೆಕ್ಟ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಹಿರಿಯ ನಟ ಆಮಿರ್ ಖಾನ್ ಅವರು ತಮ್ಮ ಸಿನಿಮಾಗಳ ಬಗ್ಗೆ ಎಷ್ಟು ಕಟ್ಟುನಿಟ್ಟಾಗಿದ್ದಾರೋ, ತಮ್ಮ ಕುಟುಂಬ ಮತ್ತು ಮಕ್ಕಳ ವೃತ್ತಿಜೀವನದ ಬಗ್ಗೆ ಅಷ್ಟೇ ಭಾವುಕರು. ಇತ್ತೀಚೆಗೆ ನಡೆದ ‘ಏಕ್ ದಿನ್ ಕಿ ಮೆಹ್ಫಿಲ್’ ಕಾರ್ಯಕ್ರಮದಲ್ಲಿ ಈ ಮಾತು ಮತ್ತೊಮ್ಮೆ ಸಾಬೀತಾಗಿದೆ. ತಮ್ಮ ಮಗ ಜುನೈದ್ ಖಾನ್ ಅಭಿನಯದ ಮುಂಬರುವ ಚಿತ್ರ ‘ಏಕ್ ದಿನ್’ ಚಿತ್ರದ ಪ್ರಚಾರದ ವೇಳೆ ಆಮಿರ್ ಖಾನ್ ಎಲ್ಲರ ಸಮ್ಮುಖದಲ್ಲೇ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಆಮಿರ್ ಖಾನ್ ಅವರು ಚಿತ್ರದ ವಿಶೇಷ ತುಣುಕೊಂದನ್ನು ವೀಕ್ಷಿಸುತ್ತಾ ಭಾವುಕರಾಗಿದ್ದಾರೆ. ಕಣ್ಣೀರು ತಡೆಯಲಾಗದೆ ತಮ್ಮ ಶರ್ಟ್‌ನಿಂದಲೇ ಕಣ್ಣೊರೆಸಿಕೊಂಡ ಆಮಿರ್ ಅವರನ್ನು ಕಂಡು ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ಈ ವೇಳೆ ಅವರ ಪಕ್ಕದಲ್ಲೇ ಇದ್ದ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಮತ್ತು ಮಗ ಜುನೈದ್ ಖಾನ್ ಅವರು ಆಮಿರ್ ಅವರನ್ನು ಸಮಾಧಾನಪಡಿಸಿದ್ದಾರೆ. ಈ ಭಾವನಾತ್ಮಕ ಕ್ಷಣವು ತಂದೆಯೊಬ್ಬನಿಗೆ ತನ್ನ ಮಗನ ಸಾಧನೆಯ ಬಗ್ಗೆ ಇರುವ ಹೆಮ್ಮೆಯನ್ನು ತೋರಿಸುವಂತಿತ್ತು.

ಇದೇ ಕಾರ್ಯಕ್ರಮದಲ್ಲಿ ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ ಅವರ ಬಗ್ಗೆ ಆಮಿರ್ ಖಾನ್ ಮುಕ್ತಕಂಠದಿಂದ ಪ್ರಶಂಸಿದ್ದಾರೆ. “ಸಾಯಿ ಪಲ್ಲವಿ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಇಂದು ನಮ್ಮ ದೇಶದಲ್ಲಿರುವ ಅತ್ಯುತ್ತಮ ನಟಿಯರಲ್ಲಿ ಸಾಯಿ ಪಲ್ಲವಿ ಅಗ್ರಸ್ಥಾನದಲ್ಲಿದ್ದಾರೆ ಎಂದು ನಾನು ಧೈರ್ಯವಾಗಿ ಹೇಳಬಲ್ಲೆ. ಅವರ ನಟನೆ ನೋಡಿ ನೀವು ಬೆರಗಾಗುವುದು ಖಚಿತ” ಎಂದು ಹೊಗಳಿಕೆಯ ಮಳೆ ಸುರಿಸಿದರು. ಸಾಯಿ ಪಲ್ಲವಿಗೆ ಇದು ಮೊದಲ ಬಾಲಿವುಡ್ ಸಿನಿಮಾ ಎಂಬುದು ವಿಶೇಷ.

ಮಗನ ಬಗ್ಗೆ ಮಾತನಾಡಿದ ಆಮಿರ್, “ಜುನೈದ್ ಕೂಡ ಪರವಾಗಿಲ್ಲ ಎಂಬಂತೆ ನಟಿಸಿದ್ದಾನೆ. ಅವನು ನನ್ನ ಮಗನಾದ್ದರಿಂದ ನಾನೇ ಹೆಚ್ಚು ಹೊಗಳುವುದು ಸರಿಯಲ್ಲ. ಆದರೆ ಚಿತ್ರದ ಪ್ರತಿಯೊಬ್ಬ ಕಲಾವಿದರೂ ತಮ್ಮ ಶ್ರೇಷ್ಠ ಮಟ್ಟದ ಅಭಿನಯ ನೀಡಿದ್ದಾರೆ” ಎಂದು ತಮಾಷೆಯಾಗಿ ನುಡಿದರು. ಅಷ್ಟೇ ಅಲ್ಲದೆ, ಕಾರ್ಯಕ್ರಮದಲ್ಲಿ ಚಿತ್ರದ ಶೀರ್ಷಿಕೆ ಗೀತೆಯನ್ನು ಹಾಡುವ ಮೂಲಕ ಆಮಿರ್ ಪ್ರೇಕ್ಷಕರನ್ನು ರಂಜಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !