ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಸಿನಿಮಾ ರಂಗದ ಪ್ರತಿಷ್ಠಿತ ವೇದಿಕೆಯಲ್ಲಿ ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅದ್ಭುತ ಕ್ರೇಜ್ ಸೃಷ್ಟಿಯಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿರುವ ವಿಶ್ವಪ್ರಸಿದ್ಧ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ (SDCC) ಸಮಾವೇಶದಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾರಿ ಸಂಚಲನ ಸೃಷ್ಟಿಸಿದ್ದಾರೆ.
ಭಾರತೀಯ ಚಿತ್ರರಂಗದ ಅತ್ಯಂತ ಹೈ-ಬಜೆಟ್ ಪೌರಾಣಿಕ ಸಿನಿಮಾವಾದ ‘ರಾಮಾಯಣ’ ಚಿತ್ರದ ಅಂತಾರಾಷ್ಟ್ರೀಯ ಪ್ರಚಾರಕ್ಕಾಗಿ ಯಶ್ ಹಾಗೂ ಬಾಲಿವುಡ್ ನಟ ರಣಬೀರ್ ಕಪೂರ್ ಅಮೆರಿಕಕ್ಕೆ ತೆರಳಿದ್ದಾರೆ. ಆದರೆ, ಕಾಮಿಕ್ ಕಾನ್‌ನ ಅತ್ಯಂತ ದೊಡ್ಡ ಸಭಾಂಗಣವಾದ ‘ಬಾಲ್‌ರೂಮ್ 20’ ಗೆ ಯಶ್ ಎಂಟ್ರಿ ಕೊಡುತ್ತಿದ್ದಂತೆ ಅಲ್ಲಿದ್ದ ಅನಿವಾಸಿ ಭಾರತೀಯ ಅಭಿಮಾನಿಗಳು ಅವರ ಮುಂಬರುವ ಗ್ಯಾಂಗ್‌ಸ್ಟರ್ ಆಕ್ಷನ್ ಸಿನಿಮಾ ‘ಟಾಕ್ಸಿಕ್’ ನ ಪ್ರಸಿದ್ಧ ‘ಡ್ಯಾಡಿಸ್ ಹೋಂ’ ಡೈಲಾಗ್ ಅನ್ನು ಕೂಗುವ ಮೂಲಕ ಇಡೀ ಸಭಾಂಗಣವೇ ಅದಿರುವೆಂತೆ ಜೈಕಾರ ಹಾಕಿದ್ದಾರೆ. ‘ರಾಮಾಯಣ’ ಚಿತ್ರದ ಪ್ರಚಾರಕ್ಕೆ ಹೋದ ಕಡೆಯೂ ಯಶ್ ಅವರ ‘ಟಾಕ್ಸಿಕ್’ ಸಿನಿಮಾದ ಹವಾ ಜೋರಾಗಿರುವುದು ಎಲ್ಲರ ಗಮನ ಸೆಳೆದಿದೆ.
ಗ್ಲೋಬಲ್ ವೇದಿಕೆಯಲ್ಲಿ ಅಬ್ಬರ
ಹಾಲಿವುಡ್‌ನ ಮಾರ್ವೆಲ್ ಮತ್ತು ಡಿಸಿ ಸಿನಿಮಾಗಳ ದೊಡ್ಡ ದೊಡ್ಡ ಅಪ್‌ಡೇಟ್‌ಗಳು ಹೊರಬೀಳುವ ಪ್ರತಿಷ್ಠಿತ ‘ಕಾಮಿಕ್ ಕಾನ್’ ವೇದಿಕೆಯಲ್ಲಿ ಭಾರತೀಯ ಸಿನಿಮಾವೊಂದರ ಪ್ರಚಾರ ಕಾರ್ಯಕ್ರಮ ನಡೆದಿರುವುದು ಇದೇ ಮೊದಲು. ಅಮೆರಿಕದ ರೆಡ್ ಕಾರ್ಪೆಟ್ ಮೇಲೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸಲು ಯಶ್ ಕಪ್ಪು ಸೂಟ್‌ಗೆ ವಿಶೇಷ ತ್ರಿಶೂಲದ ಬ್ರೋಚ್ ಧರಿಸಿ ರಗಡ್ ಆಗಿ ಕಾಣಿಸಿಕೊಂಡರೆ, ರಣಬೀರ್ ಕಪೂರ್ ನೆಹರು ಜಾಕೆಟ್ ಧರಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:
ಶಕ್ತಿಶಾಲಿ ರಾವಣನ ಪಾತ್ರ
500 ಮಿಲಿಯನ್ ಡಾಲರ್ ಬಜೆಟ್‌ನ ಈ ಮಹಾಕಾವ್ಯ ಆಧಾರಿತ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡರೆ, ರಾಕಿಂಗ್ ಸ್ಟಾರ್ ಯಶ್ ಲಂಕಾಧಿಪತಿ ರಾವಣನ ಅತಿ ಶಕ್ತಿಶಾಲಿ ಹಾಗೂ ವಿಭಿನ್ನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಈ ದೃಶ್ಯ ವೈಭವದ ಚಿತ್ರದ ಮೊದಲ ಭಾಗವು 2026 ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.



