ಹೊಸದಿಗಂತ ಡಿಜಿಟಲ್ ಡೆಸ್ಕ್:
NEET ಪರೀಕ್ಷಾ ಅಕ್ರಮದ ವಿರುದ್ಧ ಹೋರಾಡಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಕಾರಣವಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP), ಈಗ ಭಾರತೀಯ ಚುನಾವಣಾ ಆಯೋಗದ ವಿರುದ್ಧ ಸಮರ ಸಾರಿದೆ.
ಚುನಾವಣಾ ಆಯುಕ್ತರ ನಡುವಿನ ಆಂತರಿಕ ಭಿನ್ನಾಭಿಪ್ರಾಯಗಳು ಮಾಧ್ಯಮಗಳ ಮೂಲಕ ಬಹಿರಂಗಗೊಳ್ಳುತ್ತಿದ್ದಂತೆ ಎಚ್ಚೆತ್ತಿರುವ ಸಿಜೆಪಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ 48 ಗಂಟೆಗಳ ಒಳಗೆ ರಾಜೀನಾಮೆ ನೀಡುವಂತೆ ಅಂತಿಮ ಎಚ್ಚರಿಕೆ ನೀಡಿದೆ. ಒಂದು ವೇಳೆ ರಾಜೀನಾಮೆ ನೀಡದಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಎಚ್ಚರಿಸಿದೆ.
ನವದೆಹಲಿಯಲ್ಲಿ ನಡೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ CJP ನಾಯಕರು, ಚುನಾವಣಾ ಆಯೋಗದ ಪಾರದರ್ಶಕತೆಯನ್ನು ಮುಕ್ತವಾಗಿ ಪ್ರಶ್ನಿಸಿದ್ದಾರೆ.
CJP ನಾಯಕರ ಪ್ರಮುಖ ಬೇಡಿಕೆಗಳು
ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ತಮ್ಮ ಸ್ಥಾನವನ್ನು ತೊರೆಯಬೇಕು. ಸದ್ಯಕ್ಕೆ ದೇಶದಲ್ಲಿ ನಡೆಯಲಿರುವ ಮುಂಬರುವ ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ತಕ್ಷಣವೇ ತಡೆಹಿಡಿಯಬೇಕು. ಇಡೀ ವಿವಾದದ ಹಿಂದೆ ಇರುವ ಜ್ಞಾನೇಶ್ ಕುಮಾರ್ ಮತ್ತು ಅವರಿಗೆ ನಿರ್ದೇಶನ ನೀಡಿದ ಸೂತ್ರಧಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಬೇಕು. ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆಯನ್ನು (SIR) ರದ್ದುಗೊಳಿಸಿ, 2025ರ ಮತದಾರರ ಪಟ್ಟಿಯನ್ನೇ ಬಳಸಬೇಕು. ಆಯೋಗದ ಇತ್ತೀಚಿನ ಫೈಲ್‌ಗಳನ್ನು ಸುಪ್ರೀಂ ಕೋರ್ಟ್ ನೇತೃತ್ವದ ಸಮಿತಿಯ ವಶಕ್ಕೆ ಒಪ್ಪಿಸಬೇಕು ಹಾಗೂ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಹೋರಾಟಕ್ಕೆ ಕಾರಣವೇನು?
ಇತ್ತೀಚಿನ ಮಾಧ್ಯಮ ತನಿಖೆಯೊಂದರ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಆಯೋಗದ ನಿರ್ಧಾರಗಳ ಬಗ್ಗೆ ಕನಿಷ್ಠ 14 ಬಾರಿ ಲಿಖಿತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ವರದಿ ದೇಶಾದ್ಯಂತ ಸಂಚಲನ ಮೂಡಿಸಿದೆ. ಆದರೆ ಈ ಆರೋಪಗಳನ್ನು ತಳ್ಳಿಹಾಕಿರುವ ಚುನಾವಣಾ ಆಯೋಗವು, “ಆಯೋಗದೊಳಗೆ ಭಿನ್ನಾಭಿಪ್ರಾಯಗಳು ಮತ್ತು ಚರ್ಚೆಗಳು ನಡೆಯುವುದು ಪ್ರಜಾಪ್ರಭುತ್ವದ ಸಹಜ ಪ್ರಕ್ರಿಯೆ. ಕಳೆದ ಒಂದು ವರ್ಷದಲ್ಲಿ ಕೈಗೊಂಡ ಎಲ್ಲಾ ನಿರ್ಧಾರಗಳು ಒಮ್ಮತದಿಂದಲೇ ಆಗಿವೆ” ಎಂದು ಸ್ಪಷ್ಟನೆ ನೀಡಿದೆ.
ಗೃಹ ಸಚಿವರ ಸೂಚನೆಯಂತೆ ಸಿಇಸಿ ಕೆಲಸ ಮಾಡುತ್ತಿದ್ದಾರೆ: ಆರೋಪ
CJP ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇಶಾರೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ. ಜ್ಞಾನೇಶ್ ಕುಮಾರ್ ಬಂದ ಮೇಲೆ ಬಿಜೆಪಿಯ ಮತಗಳ ಪ್ರಮಾಣ ಹಿಂದೆಂದೂ ಕಾಣದ ಮಟ್ಟಿಗೆ ಹೆಚ್ಚಾಗಿದೆ ಎಂದು ಅವರು ದೂರಿದ್ದಾರೆ. ಮತ್ತೊಬ್ಬ ನಾಯಕ ಅಶುತೋಷ್ ರಂಕಾ ಮಾತನಾಡಿ, 16 ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯನ್ನು (SIR) ಬಿಜೆಪಿಗೆ ಲಾಭ ಮಾಡಿಕೊಡಲು ಬಳಸಲಾಗುತ್ತಿದೆ. ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಳ್ಳುವವರಿಗೆ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸುವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ʼಸ್ಕೂಲ್ ಠೀಕ್ ಕರೋʼ ಅಭಿಯಾನದಿಂದ ʼಮತಗಳ ರಕ್ಷಣೆʼ ಕಡೆಗೆ
ಸರ್ಕಾರಿ ಶಾಲೆಗಳ ಸುಧಾರಣೆಗಾಗಿ ದೇಶಾದ್ಯಂತ ಪ್ರವಾಸ ಮಾಡುತ್ತಿದ್ದಾಗ ನಮಗೆ ಜನರ ಅಸಲಿ ಆಕ್ರೋಶ ತಿಳಿಯಿತು ಎಂದು ಸಿಜೆಪಿ ನಾಯಕರು ಹೇಳಿದ್ದಾರೆ. ಶಾಲೆಗಳಿಗಿಂತಲೂ ಈಗ ‘ವೋಟ್ ಚೋರಿ’ ದೇಶದ ದೊಡ್ಡ ಸಮಸ್ಯೆಯಾಗಿದೆ ಎಂದು ಜನ ನಮಗೆ ಹೇಳುತ್ತಿದ್ದಾರೆ. ಹೀಗಾಗಿ ನಾವು ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಬೀದಿಗೆ ಇಳಿಯುತ್ತಿದ್ದೇವೆ ಎಂದು ಸಹ-ಸಂಚಾಲಕ ಸೌರವ್ ದಾಸ್ ತಿಳಿಸಿದ್ದಾರೆ. ದೇಶದ ಯುವ ಪೀಳಿಗೆ ಹಾಗೂ Gen Zಗಳು ದೇಶದ ಪ್ರಜಾಪ್ರಭುತ್ವ ಉಳಿಸಲು ಈ ಹೋರಾಟದಲ್ಲಿ ಕೈಜೋಡಿಸಬೇಕೆಂದು CJP ಮನವಿ ಮಾಡಿದೆ.



