ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿಯಾಗಿರುವುದು ವಿಶ್ವದ ಹಲವು ಭಾಗಗಳಲ್ಲಿ ಆತಂಕಗಳನ್ನು ಸೃಷ್ಟಿಸಿದೆ. ಡಿಜಿಟಲ್ ಕರೆನ್ಸಿ ಮಾರುಕಟ್ಟೆ ಕ್ರಿಪ್ಟೋ ಜಗತ್ತಿನಲ್ಲಿಯೂ ಇದು ಕೋಲಾಹಲ ಸೃಷ್ಟಿಸಿದ್ದು ಕ್ರಿಪ್ಟೋ ಕರೆನ್ಸಿಗಳಲ್ಲಿ ಸ್ಥಿರ ಕರೆನ್ಸಿ ಎಂದು ಪರಿಗಣನೆಯಾಗಿದ್ದ ಯುಎಸ್‌ಡಿಸಿ ತನ್ನ ಮೌಲ್ಯವನ್ನು ಕಳೆದುಕೊಂಡಿದೆ.
ಆಸ್ತಿಗಳಿಂದ ಬೆಂಬಲಿತವಾಗಿರುವ ಯುಎಸ್‌ಡಿಸಿ ಯನ್ನು ಕ್ರಿಪ್ಟೋ ಜಗತ್ತಿನಲ್ಲಿ ಸ್ಥಿರ ಕರೆನ್ಸಿಯಾಗಿ ಪರಿಗಣಿಸಲಾಗಿದ್ದು ಕ್ರಿಪ್ಟೋ ಮಾರುಕಟ್ಟೆಯಲ್ಲಿಯೇ ಎರಡನೇ ಅತಿದೊಡ್ಡ ಸ್ಟೇಬಲ್‌ಕಾಯಿನ್ ಎಂದೆನಿಸಿದೆ. ಆದರೆ ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತದಿಂದ ಯುಎಸ್‌ಡಿಸಿ ಕೂಡ ತನ್ನ ಮೌಲ್ಯ ಕಳೆದುಕೊಂಡಿದ್ದು 81.5 ಸೇಂಟ್ಸ್ ನಲ್ಲಿ ವಹಿವಾಟು ನಡೆಸುತ್ತಿದೆ. ಅದರ ಟೋಕನ್ ಮೌಲ್ಯವು ಈ ಹಿಂದೆ 1 ಡಾಲರ್‌ನಷ್ಟಿತ್ತು. ಆದರೀಗ ಸೇಂಟ್ಸ್ ಗಳಿಗೆ ಕುಸಿದಿದೆ.
ಜಗತ್ತಿನಾದ್ಯಂತ ಹೆಚ್ಚಾಗಿ ಬಳಸ್ಪಡುವ ಈ ಕ್ರಿಪ್ಟೋಕರೆನ್ಸಿಯು ಸುಮಾರು 40 ಬಿಲಿಯನ್ ಡಾಲರುಗಳಷ್ಟು ಮೀಸಲು ಸಂಗ್ರಹವನ್ನು ಹೊಂದಿದೆ. ಆದರೆ ಸಿಲಿಕಾನ್ ವ್ಯಾಲಿ ಬ್ಯಾಂಕಿನಲ್ಲಿ ಅದು ತನ್ನ 3.3 ಬಿಲಿಯನ್ ಡಾಲರ್ ಸಂಗ್ರಹವನ್ನು ಹೂಡಿಕೆ ಮಾಡಿರುವುದಾಗಿ ಬಹಿರಂಗ ಪಡಿಸಿದ್ದು ಈ ಕಾರಣದಿಂದಾಗಿ ಅದರ ಮೌಲ್ಯ ಕುಸಿತಕ್ಕೊಳಗಾಗಿದೆ.