ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಕೊಡುಗೆ ಶೂನ್ಯ, ಗರಿಷ್ಠ ಅನುದಾನ ಕೊಟ್ಟಿದ್ದು ನಾವು: ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಂದಿನ ಬಜೆಟ್‍ನಲ್ಲಿ 5 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ರಾಯಚೂರು ಜಿಲ್ಲೆಯ ಗಿಲ್ಲೇಸುಗೂರಿನಲ್ಲಿ ಇಂದು ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, 371 ಜೆ ವಿಧಿ ಜಾರಿಗೆ ಬಂದಾಗ ಕಲ್ಯಾಣ ಕರ್ನಾಟಕದ ಕುರಿತು ಜನರು ಕನಸು ಕಂಡರು. ಆ ಕನಸಿಗೆ ಕಾಂಗ್ರೆಸ್‍ನವರು ಯಾವುದೇ ಅನುದಾನ ನೀಡದೆ ತಣ್ಣೀರೆರೆಚಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗರಿಷ್ಠ ಅನುದಾನ 3 ಸಾವಿರ ಕೋಟಿ ಕೊಟ್ಟಿದ್ದೇವೆ. ರಾಯಚೂರು ವಿವಿ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿಯೊಂದು ಕ್ಷೇತ್ರಕ್ಕೆ ಅನುದಾನ ಕೊಡಲಾಗಿದೆ ಎಂದರು

ಮೀಸಲಾತಿ ಸಂಬಂಧ ಬಿಜೆಪಿ ದಿಟ್ಟ ನಿಲುವು ತೆಗೆದುಕೊಂಡಾಗ ಕಾಂಗ್ರೆಸ್‍ನವರಿಗೆ ದೀನದಲಿತರು ನೆನಪಾಗುತ್ತಾರೆ. ಇದು ಕಾಂಗ್ರೆಸ್ ಪಕ್ಷದ ಕೊಡುಗೆ ಎನ್ನುತ್ತಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಐದು ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಆಳ್ವಿಕೆಯಲ್ಲಿ ದೀನದಲಿತರಿಗಾಗಿ ನೀವು ಮಾಡಿದ್ದೇನು? ರಾಜ್ಯಕ್ಕೇ ದೌರ್ಭಾಗ್ಯ ಕೊಟ್ಟ ಕಾಂಗ್ರೆಸ್ಸಿಗರು, ಎಸ್.ಸಿ, ಎಸ್.ಟಿಗೆ ದೊಡ್ಡ ದೌರ್ಭಾಗ್ಯವನ್ನೇ ನೀಡಿದ್ದಾರೆಂದು ಟೀಕೆ ಮಾಡಿದರು.

ಮುಖ್ಯಮಂತ್ರಿಗಳು ಆರ್‌ಎಸ್‌ಎಸ್‌ ಕೈಗೊಂಬೆ ಎಂಬ ಟೀಕೆಗೆ ಉತ್ತರಿಸಿದ ಅವರು, ಆರ್‌ಎಸ್‌ಎಸ್‌ ಒಂದು ದೇಶಭಕ್ತಿಯ ಸಂಸ್ಥೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ದೇಶ ನಿರ್ಮಾಣಕ್ಕಾಗಿ, ರಾಜಕೀಯ ಸ್ಥಾನಮಾನ ಬಯಸದೆ, ಸ್ವಾರ್ಥರಹಿತವಾಗಿ ದೀನದಲಿತರ ಸೇವೆ ಮಾಡುತ್ತಾ ತಳ ಸಮುದಾಯಕ್ಕೆ ಧ್ವನಿ ಕೊಟ್ಟ ಶ್ರೇಷ್ಠ ಸಂಸ್ಥೆ ಆರ್‌ಎಸ್‌ಎಸ್‌ ಎಂದು ತಿಳಿಸಿದರು. ಆರೆಸ್ಸೆಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ ಎಂದು ನುಡಿದರು.

ಸಿದ್ದರಾಮಯ್ಯ ಅಧಿಕಾರಕ್ಕಾಗಿ ಏನೆಲ್ಲವನ್ನೂ ಮಾಡಲು ಸಿದ್ಧರಾಗಿದ್ದಾರೆ. ರೀಲಾಂಚಿಂಗ್ ರಾಹುಲ್ ಗಾಂಧಿ ಚಿಂತನೆಯೊಂದಿಗೆ ರಾಜಕೀಯದಲ್ಲಿ ಪ್ರಸ್ತುತರಾಗಲು ಪಾದಯಾತ್ರೆ ಮಾಡುತ್ತಿದ್ದಾರೆ. ದೇಶ, ಜನರು, ಬಡವರು ಮತ್ತು ದೀನದಲಿತರಿಗಾಗಿ ಈ ಯಾತ್ರೆ ಅಲ್ಲ ಎಂದು ವಿವರಿಸಿದರು. ಅಂಥ ಭಾರತ್ ಜೋಡೋಗೆ ಸಿದ್ದರಾಮಯ್ಯ ಸಾಥ್ ಕೊಡುತ್ತಿದ್ದಾರೆ. ಅವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಮುಳುಗುವ ಹಡಗು

ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗಾಗಿದೆ. ಅಲ್ಲಿನವರು ಕೆಲವೇ ದಿನದಲ್ಲಿ ಈ ಕಡೆ (ಬಿಜೆಪಿ) ಬರಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು. ನರೇಂದ್ರ ಮೋದಿ ಅವರ ಆಶೀರ್ವಾದದಿಂದ ರಾಯಚೂರಿಗೆ ಏಮ್ಸ್ ಬರಲಿದೆ ಎಂದು ವಿಶ್ವಾಸದಿಂದ ನುಡಿದರು. ನೀರಾವರಿ ಸೇರಿದಂತೆ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದ್ದೇವೆ.

ಈ ಸಂಕಲ್ಪ ಯಾತ್ರೆ ಅಂತಿಮಗೊಂಡಾಗ ಇದು ವಿಜಯಯಾತ್ರೆಯಾಗಿ ಪರಿವರ್ತನೆಗೊಳ್ಳಲಿದೆ. ಕಾಂಗ್ರೆಸ್ ಕನಸು ಕನಸಾಗಿಯೇ ಉಳಿಯಲಿದೆ. ಕರ್ನಾಟಕದಲ್ಲಿ ಜನತೆ ಈಗಾಗಲೇ ಕಾಂಗ್ರೆಸ್ ದುರಾಡಳಿತವನ್ನು ನೋಡಿದ್ದಾರೆ. ಭ್ರಷ್ಟ ನೌಕರಿ ಭಾಗ್ಯ ಕಾಂಗ್ರೆಸ್ ಸಾಧನೆ. ದಿಂಬೂ, ಹಾಸಿಗೆ, ಬೋರ್‍ವೆಲ್ ಯಾವುದನ್ನೂ ಬಿಡಲಿಲ್ಲ. ನಾವು, ರೈತರು, ರೈತರ ಮಕ್ಕಳು, ವಿದ್ಯಾರ್ಥಿಗಳು, ಹಾಲು ಉತ್ಪಾದಕರು ಸೇರಿ ಎಲ್ಲ ವರ್ಗದ ಜನರಿಗಾಗಿ ಯೋಜನೆಗಳನ್ನು ರೂಪಿಸಿ ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದಿದ್ದೇವೆ ಎಂದು ವಿವರಿಸಿದರು.

ಕಾಂಗ್ರೆಸ್ ಅವಧಿಯಲ್ಲಿ ಕಾನೂನು ಮತ್ತು ಯೋಜನೆಗಳು ಕೇವಲ ಪುಸ್ತಕದಲ್ಲಷ್ಟೇ ಉಳಿದಿದ್ದವು. ಜನರಿಗೆ ಅದರ ಪ್ರಯೋಜನ ಸಿಗಲಿಲ್ಲ ಎಂದು ತಿಳಿಸಿದರು. ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲವನ್ನು ಅರಳಿಸುವ ಸಂಕಲ್ಪವನ್ನು ಮಾಡಬೇಕೆಂದು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!