Saturday, December 9, 2023

Latest Posts

ಪಶುಸಂಗೋಪನೆ ಯೋಜನೆಗಳಿಗೆ ಸಿಎಂ ಅನುದಾನದ ಭರವಸೆ: ಸಚಿವ ಪ್ರಭು ಚವ್ಹಾಣ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಪಶುಸಂಗೋಪನೆ ಇಲಾಖೆಯಲ್ಲಿ ಅನುದಾನದ ಕೊರತೆ ನೀಗಿಸಿ ಅಭಿವೃದ್ಧಿ ಕಾರ್ಯಗಳನ್ನು ಮತ್ತಷ್ಟು ಚುರುಕುಗೊಳಿಸುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ನಡೆಸಿದ ಚರ್ಚೆ ಫಲಪ್ರದವಾಗಿದೆ. ಇಲಾಖೆಯ ಪ್ರಮುಖ್ಯ ಯೋಜನೆಗಳಿಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಪಿಂಜರಾಪೋಲ್ ಗೆ ನೆರವು:
ರಾಜ್ಯದಲ್ಲಿ ಸುಮಾರು 188 ಗೋಶಾಲೆಗಳಿದ್ದು, ಅವುಗಳಿಗೆ ಸಹಾಯಾನುದಾನದ ಯೋಜನೆ ಅಡಿಯಲ್ಲಿ 2021-22ನೇ ಸಾಲಿನಲ್ಲಿ ₹ 4 ಕೋಟಿ ನೀಡಲಾಗಿದೆ. ಸದ್ಯ ಈ ಗೋಶಾಲೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಗೋವುಗಳು ಆಶ್ರಯ ಪಡೆದಿದ್ದು, ಅವುಗಳ ಪಾಲನೆ ಪೋಷಣೆಗೆ ಹೆಚ್ಚುವರಿ ಅನುದಾನದ ಅಗತ್ಯವಿದ್ದು, ₹ 20 ಕೋಟಿ ನೀಡಲು ಸಚಿವರು ಮನವಿ ಮಾಡಿದ್ದಾರೆ.

ಪ್ರತಿ ಗೋಶಾಲೆಗೆ 100 ಎಕರೆ:
ಜಿಲ್ಲೆಗೊಂದು ಗೋಶಾಲೆ ನಿರ್ಮಾಣ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಕೆಲ ಜಿಲ್ಲೆಗಳಲ್ಲಿ ಕೇವಲ 10 ರಿಂದ 15 ಎಕರೆ ಮಾತ್ರ ಲಭ್ಯವಾಗುತ್ತಿದೆ. ಸದ್ಯ ಪಶುಸಂಗೋಪನೆ ಇಲಾಖೆಯ ಯೋಜನೆ ಅನ್ವಯ ಈ ಸ್ಥಳ ಗೋಶಾಲೆ ನಿರ್ಮಾಣ, ಗೋಉತ್ಪನ್ನಗಳ ತಯಾರಿಕೆಗೆ ಸಾಕಾಗದಿರುವುದರಿಂದ ಕನಿಷ್ಠ ಪ್ರತಿ ಜಿಲ್ಲೆಯಲ್ಲಿ ಗೋಶಾಲೆಗೆ 100 ಎಕರೆ ನಿಗದಿ ಮಾಡಲು ಕಂದಾಯ ಇಲಾಖೆಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗಿದ್ದು ಇದಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದು ಕೂಡಲೆ ಜಮೀನು ಮಂಜೂರು ಮಾಡಲು ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದಲ್ಲದೆ, ವಿಶ್ವವಿದ್ಯಾಲಯದಡಿ ಬೋಧಕ ಬೋಧಕೇತರ ಸಿಬ್ಬಂದಿ ನೇಮಕಾತಿ, ಹೈನು ವಿಜ್ಞಾನ ಮಹಾವಿದ್ಯಾಲಯ ಕಲಬುರ್ಗಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹೊಸದಿಲ್ಲಿಯಿಂದ ಮಾನ್ಯತೆ ಒದಗಿಸುವುದು, ಅಥಣಿ ಮತ್ತು ಪುತ್ತೂರಿನಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾರಂಭ ಮಾಡುವುದು ಹಾಸನದಲ್ಲಿನ ಪಶುವೈದ್ಯಕೀಯ ಮಹಾವಿದ್ಯಾಲಯದ 3ನೇ ಹಂತದ ಕಾಮಗಾರಿಗೆ ಅನುದಾನ ಮತ್ತು ವಿಶ್ವವಿದ್ಯಾಲಯದ ಆಡಳಿತ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸುವ ಕುರಿತು ಸಲ್ಲಿಸಿದ ಎಲ್ಲ ಮನವಿಗಳಿಗೆ ಮುಖ್ಯಮಂತ್ರಿಗಳು ಸ್ಪಂದನೆ ನೀಡಿದ್ದು ಇಲಾಖೆಯ ಎಲ್ಲ ಕಾರ್ಯಗಳು ಮತ್ತಷ್ಟು ವೇಗದಲ್ಲಿ ಮುಂದುವರೆಯಲು ಸಹಕಾರಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!