ಹೊಸದಿಗಂತ ಡಿಜಿಟಲ್ ಡೆಸ್ಕ್:
ನೂತನ ಸಂಸತ್ ಭವನ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಮಧ್ಯೆ ಉಕ್ಕು ಎಲೆಕ್ಟ್ರಾನಿಕ್ಸ್ ಮತ್ತು ಇತರೆ ಸಾಮಾಗ್ರಿಗಳ ಬೆಲೆ ಏರಿಕೆಯಿಂದ ಸಂಸತ್ ಭವನ ನಿರ್ಮಾಣ ಕಾಮಗಾರಿ ವೆಚ್ಚವೂ ಹೆಚ್ಚಾಗಿದೆ.
ಈ ಹಿಂದೆ ನಿರ್ಮಾಣಕ್ಕೆ 971 ಕೋಟಿ ರೂ. ಎಂದು ಮೀಸಲಿಡಲಾಗಿತ್ತು. ಇದೀಗ ಈ ವೆಚ್ಚ 1200 ಕೋಟಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ನಿರೀಕ್ಷೆಗಿಂತ ಹೆಚ್ಚು ಖರ್ಚಾಗುತ್ತಿದ್ದು, ಇದಕ್ಕೆ ಲೋಕೋಪಯೋಗಿ ಇಲಾಖೆ ಲೋಕಸಭೆಯ ಸಚಿವಾಲಯದ ಅನುಮೋದನೆ ಪಡೆಯುವ ಸಾಧ್ಯತೆ ಇದೆ.
ಈ ತಿಂಗಳ ಆರಂಭದಲ್ಲಿ ಹೊಸ ಸಂಸತ್ ಕಟ್ಟಡದ ನಿರ್ಮಾಣದ ನೋಡಲ್ ಏಜೆನ್ಸಿ ಸಿಪಿಡಬ್ಲ್ಯೂಡಿ ವೆಚ್ಚ ಹೆಚ್ಚಳಕ್ಕೆ ಲೋಕಸಭಾ ಕಾರ್ಯಾಯಲದ ತಾತ್ವಿಕ ಅನುಮೋದನೆ ಕೋರಿತ್ತು.
ಪಾರ್ಲಿಮೆಂಟ್ ಕಟ್ಟಡ ನಿರ್ಮಾಣ ಯೋಜನೆಯನ್ನು ಟಾಟಾ ಪ್ರಾಜೆಕ್ಟ್‌ಗೆ 2020ರಲ್ಲಿ 971ಕೋಟಿಗೆ ಟೆಂಡರ್ ನೀಡಲಾಗಿತ್ತು. ಸರ್ಕಾರವು ಕಟ್ಟಡಕ್ಕಾಗಿ ಅ.2022 ಗಡುವು ನಿಗದಿಪಡಿಸಿತ್ತು. 2022 ರ ಚಳಿಗಾಲದ ಅಧಿವೇಶನವನ್ನು ಹೊಸ ಕಟ್ಟಡದಲ್ಲಿ ನಡೆಸುವ ಆಲೋಚನೆ ಇತ್ತು. ಆದರೆ ಇದೀಗ ವೆಚ್ಚ ಹೆಚ್ಚಳ ಹಿನ್ನೆಲೆ ಅನುಮೋದನೆಗಾಗಿ ಕಳುಹಿಸುವ ಸಾಧ್ಯತೆ ಇದ್ದು, ಕಾಮಗಾರಿ ತಡವಾಗಲಿದೆ.