ಹೊಸದಿಗಂತ ವರದಿ, ಗದಗ :
ಸಿದ್ದರಾಮಯ್ಯನವರು ನಮ್ಮ ಮುಖ್ಯಮಂತ್ರಿಗಳು ಮತ್ತು ನಮ್ಮ ನಾಯಕರು ಆಗಿರುವದರಿಂದ ಈ ಕುರಿತು ಅನಾವಶ್ಯಕವಾಗಿ ಗೊಂದಲ ಸೃಷ್ಟಿ ಮಾಡುವದಿಲ್ಲ, ಮಾಧ್ಯಮದವರಿಗೂ ಗೊತ್ತು ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ ಆದರೂ ಸುದ್ದಿಗಳು ಸೃಷ್ಟಿಯಾಗುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ್ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನವೇ ಖಾಲಿ ಇಲ್ಲ. ಪ್ರಶ್ನೆಯೂ ಉದ್ಭವಿಸುವದಿಲ್ಲ. ಮುಂದಿನ ಮುಖ್ಯಮಂತ್ರಿ ಚರ್ಚೆಗೆ ಇದು ಸಮಯವೂ ಅಲ್ಲ, ಅನಾವಶ್ಯಕ ಚರ್ಚೆಯನ್ನು ವಿವೇಕ ಇದ್ದವರು ಮಾಡುವದಿಲ್ಲ,ನಾಯಕರ ಹೇಳಿಕೆ ವಿಚಾರವಾಗಿ ಯಾವುದೇ ಪ್ರಶ್ನೆಗೂ ಉತ್ತರ ನೀಡುವದಿಲ್ಲ ಎಂದ ಹೇಳಿದರು.
ಅಮೇರಿಕಾ ಪ್ರವಾಸದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂವಾದ ಕುರಿತು ಪ್ರತಿಕ್ರಿಯಿಸಿದ ಅವರು ರಾಹುಲ್ ಗಾಂಧಿಯವರು ಹೇಳಿಕೆ ಕೊಟ್ಟಿದ್ದನ್ನು ಗಮನಿಸಿ ತಿದ್ದಿಕೊಳ್ಳುವ ಪ್ರಯತ್ನ ಬಿಜೆಪಿಯವರು ಮಾಡಲಿ.ಟೀಕೆ ಮಾಡುವದಕ್ಕೆ ಬಳಕೆ ಮಾಡಿಕೊಳ್ಳಬಾರದು. ರಾಹುಲ್ ಗಾಂಧಿಯವರನ್ನು ಎಷ್ಟೆ ಅವಹೇಳನ ಮಾಡಿದರೂ ಅವರನ್ನು ನಾಯಕ ಎಂದು ಜನರು ಗುರುತಿಸಿದ್ದಾರೆ. ವಿರೋಧ ಪಕ್ಷದ ನಾಯಕ ಎಂದು ಮಾಡಿದ್ದಾರೆ. ಬಿಜೆಪಿಯ ಉದ್ದೇಶ ಯಶಸ್ವಿಯಾಗಲ್ಲ ಎಂದು ಹೇಳಿದರು.
ಮಹದಾಯಿಗೆ ಯೋಜನೆ ಕುರಿತಂತೆ ಪ್ರತಿಕ್ರಿಯಿಸಿದ ಅವರು ಮಹದಾಯಿಗೆ ಸಂಬoಧಿಸಿದoತೆ ಶೀಘ್ರ ಸರ್ವ ಪಕ್ಷದ ಸಭೆ ಕರೆಯಲಾಗುವುದು. ಈ ಸಭೆಯಲ್ಲಿ ಯಾವಾಗ ನಿಯೋಗ ತೆಗೆದುಕೊಂಡು ಹೋಗಬೇಕು ಎನ್ನುವ ಬಗ್ಗೆ ಚರ್ಚೆ ಮಾಡಲಾಗುವದು. ನಮ್ಮ ಪ್ರಯತ್ನ ಯಶಸ್ವಿಯಾಗದಿದ್ದಲ್ಲಿ. ಕಾನೂನಾತ್ಮಕ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ಕಾಂಗ್ರೆಸ್‌ನಿoದಲೇ ಮಹದಾಯಿ ಯೋಜನೆಗೆ ಹಿನ್ನೆಡೆ ಎಂಬ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯೆಸಿ ನ್ಯಾಯಾಧಿಕರಣ ಮಾಡಿ ಎಂದು ಅರ್ಜಿ ಕೊಟ್ಟವರು ಯಾರು?, ಮನಮೋಹನ್ ಸಿಂಗ್ ನ್ಯಾಯಾಧಿಕರಣ ಮಾಡಿದ್ದರು. ಉತ್ತರ ಕರ್ನಾಟಕದ ಈ ಸಮಸ್ಯೆಯನ್ನು ರಾಜಕಾರಣ ಮಾಡಬೇಡಿ. ಸಮಯ ಸುಮ್ಮನೇ ಕಳೆದು ಹೋಗಬಾರದು ಎಂದು ನ್ಯಾಯಾಧಿಕರಣ ಮಾಡಿದ್ದು. ಮುಖ್ಯಮಂತ್ರಿಯಾದವರು ಕಾಗದ ತೋರಿಸಿ ಗೋವಾ ಸರ್ಕಾರ ಅನುಮತಿ ಕೊಟ್ಟಿದೆ ಎಂದು ಹೇಳಿದ್ದರು. ಚುನಾವಣೆಗೆ ಬಳಕೆ ಮಾಡಿಕೊಂಡರು. ಮೋದಿ ಮೂರು ತಿಂಗಳಲ್ಲಿ ಎಲ್ಲರನ್ನು ಕರೆದು ಸಮಸ್ಯೆಗೆ ಪರಿಹಾರ ಕೊಡುತ್ತೇನೆ ಎಂದಿದ್ದರು ಎಂದು ಹೇಳಿದರು.