ಹೊಸದಿಗಂತ ವರದಿ, ಸಂಡೂರು:
ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಹಣವನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಅಕ್ರಮವಾಗಿ ಬಳಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಹಣ ಹಂಚಿ ಮತದಾರರ ಮೇಲೆ ಪ್ರಭಾವ ಬೀರಿ ಗೆಲುವು ಸಾಧಿಸಿದ ಈ ತುಕಾರಾಂ ಅವರ ಗೆಲುವನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಶೀಘ್ರದಲ್ಲೇ ಹೈಕೋರ್ಟ್ ನಲ್ಲಿ ದಾವೆ ಹೂಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ರಾಧಾ ಮೋಹನ್ ದಾಸ್ ಅಗರವಾಲ್ ಅವರು ಹೇಳಿದರು.
ಪಟ್ಟಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪರಿಶಿಷ್ಟ ಪಂಗಡ ಸಮುದಾಯದವರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ಕಳೆದ ಲೋಕಸಭೆ ಚುನಾವಣೆಯಲ್ಲಿ ಬಳಕೆ ಮಾಡಿ, ಮತದಾರರಿಗೆ ಆಮಿಷ ತೋರಿಸಿ ಗೆಲುವು ಸಾಧಿಸಿದ್ದು, ಇದು ಇಡೀ ಕ್ಷೇತ್ರದ ಜನರಿಗೆ ಮಾಡಿದ ಅಪಮಾನ ಎಂದು ವಾಗ್ದಾಳಿ ನಡೆಸಿದರು.
ಬಳ್ಳಾರಿ – ವಿಜಯನಗರ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ವಾಲ್ಮೀಕಿ ಅಭಿವೃದ್ದಿ ನಿಗಮದ 20.19 ಕೋಟಿ ರೂ.ಹಣ ಬಳಕೆಯಾಗಿದೆ ಎಂದು ಜಾರಿ (ಇಡಿ) ನಿರ್ದೇಶನಾಲಯದ ಅಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಹಿಂದೆ ಕಳೆದ 1975ರಲ್ಲೂ ಇದೆ ರೀತಿ ಹಣ, ಮಧ್ಯ ಹಂಚಿ ಗೆಲುವು ಸಾಧಿಸಿದ್ದ ಇಂದಿರಾಗಾಂಧಿ ಅವರ ಗೆಲುವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ದಾವೆ ಹೂಡಲಾಗಿತ್ತು. ಅಂದು ಹೈಕೋರ್ಟ್ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ತೀರ್ಪು ಪ್ರಕಟಿಸಿತ್ತು. ಈ ಹಿನ್ನೆಲೆ ಇಂದಿರಾ ಗಾಂಧಿ ಅವರು, ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಸದ್ಯ ಬಳ್ಳಾರಿ ಸoಸದ ಈ ತುಕಾರಾಂ ಅವರ ಪ್ರಕರಣವು ಅದೇ ರೀತಿಯಾಗಲಿದೆ ಎಂದರು.
ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಶಾಸಕ ಹಾಗೂ ನಿಗಮದ ಅಧ್ಯಕ್ಷ ದದ್ದಲ್ ಬಸವನಗೌಡ ಅವರ ಪಾತ್ರವಿದ್ದರು ಎಸ್ ಐಟಿ ಅವರು ಹೆಸರನ್ನು ವರದಿಯಲ್ಲಿ ನಮೂದಿಸದೇ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು. ಆದರೆ, ಇಡಿ ಅಧಿಕಾರಿಗಳು ಸಲ್ಲಿಸಿದ ಚಾರ್ಜ್ ಶಿಟ್ ನಲ್ಲಿ ಇಬ್ಬರ ಪಾತ್ರವೂ ಈ ಹಗರಣದಲ್ಲಿದೆ ಎಂದು ನಮೂದಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಹಗರಣದಲ್ಲಿ ಮುಳುಗಿದೆ. ಪ್ರತಿ ಹಂತದಲ್ಲೂ ಅಕ್ರಮ ತಾಂಡವಾಡುತ್ತಿದೆ. ವಾಲ್ಮೀಕಿ ಅಭಿವೃದ್ದಿ ನಿಗಮದ ಬಹು ಕೋಟಿ ಹಗರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದು, ಅವರ ಈ ಪ್ರಯತ್ನ ಫಲ ನೀಡೋಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಮ್ಮಲ್ಸಿ ವೈ.ಎಂ.ಸತೀಶ್, ಮಾಜಿ ಸಚಿವ ಶ್ರೀರಾಮುಲು, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ, ಜಿ.ಟಿ.ಪಂಪಾಪತಿ, ಕೆ.ಎಸ್.ದಿವಾಕರ್ ಇತರರಿದ್ದರು.