April 13, 2026
Monday, April 13, 2026
spot_img

ಪುಟ್ಟ ಮಕ್ಕಳ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದನೆ: ಬಜೆಟ್‌ನಲ್ಲಿ ನೀರಾವರಿ ಯೋಜನೆ ಘೋಷಣೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೆಲವು ಸಮಯದ ಹಿಂದೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ನೀರಿನ‌ ಸಮಸ್ಯೆ ಕುರಿತು ಮಕ್ಕಳು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದರು.

ಇದೀಗ ಈ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಸ್ಪಂದಿಸಿದ್ದು, ಗ್ರಾಮಕ್ಕೆ ನೀರಾವರಿ ಯೋಜನೆಯನ್ನು ಘೋಷಿಸಿ, ಅನುದಾನವನ್ನು ಸಹ ಮೀಸಲಿಟ್ಟಿದ್ದಾರೆ.

ಈ ಬಗ್ಗೆ ಸ್ವತಃ ಸಿಎಂ ಮಾಹಿತಿ ಹಂಚಿಕೊಂಡಿದ್ದು, ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ನೀರಿನ‌ ಸಮಸ್ಯೆ ಕುರಿತು ಕೆಲವು ಸಮಯದ ಹಿಂದೆ ಮಕ್ಕಳು ಪತ್ರ ಬರೆದು, ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡುವಂತೆ ನನ್ನಲ್ಲಿ ಮನವಿ ಮಾಡಿದ್ದರು.ಮಕ್ಕಳ ಕೋರಿಕೆಯ ಮೇರೆಗೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದಾಗ‌ ಆ ಹಳ್ಳಿಗೆ ಸಮರ್ಪಕ ನೀರಾವರಿ ಯೋಜನೆಯೊಂದರ ಅಗತ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಈ ಸಾಲಿನ ಬಜೆಟ್‌ನಲ್ಲಿ “ಉಡುತೊರೆಹಳ್ಳ ನೀರಾವರಿ ಯೋಜನೆ”ಯನ್ನು ಘೋಷಿಸಿ, 490 ಕೋಟಿ ರೂ. ಅನುದಾನವನ್ನು ಸಹ ಮೀಸಲಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ಅಹವಾಲು ಸಲ್ಲಿಸಿದ ಮಕ್ಕಳ ಧ್ವನಿ ಎಳೆಯದಾದರೂ, ಅದನ್ನು ಕಡೆಗಣಿಸದೆ ಮುಕ್ತವಾಗಿ‌ ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸುವ ತಾಯಿಯ ಹೃದಯ ನಮ್ಮ ಸರ್ಕಾರದ್ದು. ಪುಟಾಣಿ ಮಕ್ಕಳ‌ ಧನ್ಯವಾದವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ, ನನ್ನ ಮತ್ತು ನಮ್ಮ ಸರ್ಕಾರದ ಮೇಲೆ ವಿಶ್ವಾಸವಿಟ್ಟು ತಮ್ಮ ಕಷ್ಟವನ್ನು ನಮ್ಮ ಗಮನಕ್ಕೆ ತಂದು, ಇಂದು ಸಾವಿರಾರು ಕುಟುಂಬಗಳ ಭವಿಷ್ಯ ಬದಲಾಗಲು ಕಾರಣರಾದ ಪುಟಾಣಿಗಳಿಗೂ ಪ್ರೀತಿತುಂಬಿದ ಅಪ್ಪುಗೆಗಳು ಎಂದು ಸಿಎಂ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !