ಬಾಕಿಯಿರುವ ಹಲವು ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ: ಸಿಎಂ ಬೊಮ್ಮಾಯಿ ತೀರ್ಮಾನ

ಹೊಸದಿಗಂತ ವರದಿ ಶಿವಮೊಗ್ಗ :

ಬಹಳ ವರ್ಷಗಳಿಂದ ಬಾಕಿ ಇರುವ ಅರಣ್ಯ ಸಂಬಂಧಿ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮೇ ಮೊದಲ ವಾರದಲ್ಲಿ ಸಚಿವರು, ಉನ್ನತ ಅಧಿಕಾರಗಳ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ತಿಳಿಸಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಸೇರಿದಂತೆ ನಾಲ್ಕೈದು ಜಿಲ್ಲೆಗಳಲ್ಲಿ ಸಮಸ್ಯೆ ಇದ್ದು, ಇವುಗಳ ಪರಿಹಾರ ಕುರಿತು ಚರ್ಚಿಸಲಾಗುತ್ತದೆ. ಕೆಲವು ಸಮಸ್ಯೆಗಳನ್ನು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರದ ಸಲಹೆ ಪಡೆದು ಪರಿಹರಿಸಬೇಕಿದೆ. ಆ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಭೂ ಅಕ್ರಮ ಕಾಯ್ದೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಅದೀಗ ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆಯಾಗಿ ರೈತರು ಕಾನೂನು ಸಮಸ್ಯೆ ಎದುರಿಸುತ್ತಿರುವುದು ಸರ್ಕಾರದ ಗಮಕ್ಕೆ ಬಂದಿದೆ. ಹೀಗಾಗಿ ಜೀವನೋಪಾಯಕ್ಕಾಗಿ ಹಾಗೂ ವಾಸದ ಮನೆಗಳಿಗಾಗಿ ಭೂಮಿ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ಹೊರತುಪಡಿಸಲು ತೀರ್ಮಾನಿಸಲಾಗುತ್ತದೆ ಎಂದರು. ಪ್ರಸ್ತುತ ಮುನ್ನೆಲೆಗೆ ಬಂದಿರುವ ಗುತ್ತಿಗೆಯಲ್ಲಿನ ಕಮೀಷನ್ ಪ್ರಕರಣಕ್ಕೆ ಕಡಿವಾಣ ಹಾಕಲು ಹೈಕೋರ್ಟ್ ನಿವೃತ್ತ ಜಡ್ಜ್ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಲು ತೀರ್ಮಾನಿಸಿದ್ದು, ಈ ಸಂಬಂಧ ಜಿಓ ಕೂಡ ಆಗಿದೆ. ಇದರಲ್ಲಿ ತಾಂತ್ರಿಕ ಪರಿಣತರು ಇರುತ್ತಾರೆ. 50ಕೋಟಿ ವರೆಗಿನ ಟೆಂಡರ್ ಪ್ರಕ್ರಿಯೆಗಳು ಈ ಸಮಿತಿ ಮುಂದೆ ಬಂದು ತೀರ್ಮಾನಿಸಲಾಗುತ್ತದೆ. ಕೆಟಿಟಿಪಿ ಕಾಯ್ದೆ ಅಡಿಯಲ್ಲಿಯೇ ಸಮಿತಿ ರಚನೆಯಾಗಲಿದೆ ಎಂದರು.

ಗ್ರಾಪಂ, ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಮೌಖಿಕ ಆದೇಶದ‌ ಮೇಲೆ ಕೆಲಸ ಮಾಡದಂತೆ ಸೂಚಿಸಲಾಗಿದೆ. ಹಾಗೇನಾದರೂ ಸೂಚಿಸಿ ಕೆಲಸ ಆದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ನೇರಹೊಣೆ ಮಾಡಲಾಗುತ್ತದೆ ಎಂದರು. ಪ್ರಸ್ತುತ ತೆರಿಗೆ ಸಂಗ್ರಹ ಹೆಚ್ಚಳವಾಗಿದ್ದು, ಆರ್ಥಿಕ ಸ್ಥಿತಿ ಸುಧಾರಿಸಿದೆ. 67,100 ಕೋಟಿ ರೂ. ಸಾಲ ಪಡೆಯಲು ತೀರ್ಮಾನಿಸಲಾಗಿತ್ತು. ತೆರಿಗೆ ಹೆಚ್ಚಳದಿಂದಾಗಿ 63,100 ಕೋಟಿ ರೂ. ಸಾಲ ಪಡೆಯಲಾಗಿದೆ. 15 ಸಾವಿರ ಕೋಟಿ ಆದಾಯ ಕೊರತೆ ಆಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ 6 ಸಾವಿರ ಕೋಟಿ ರೂ. ಮಾತ್ರ ಕಡಿಮೆಯಾಗಲಿದೆ ಎಂದರು.

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇಲ್ಲ. ಹೆಚ್ಚಿನ ಉತ್ಪಾದನೆ ಇದೆ. ಆದರೆ ಪೂರೈಕೆ ಸಮರ್ಪಕವಾಗಿಲ್ಲ. ಇದನ್ನು ಸರಿಪಡಿಸಲು ಹೆಚ್ಚಿನ ಸ್ಟೇಶನ್ ಗಳನ್ನು ನಿರ್ಮಿಸಲಾಗುತ್ತದೆ. ಗ್ರಿಡ್ ಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಕ್ರಮ ವಹಿಸಲಾಗುತ್ತದೆ ಎಂದರು. ಕೇವಲ ವಾಟ್ಸಪ್‌ನ ಒಂದು ಸ್ಟೇಟಸ್ ಗೆ ಜನ ಕೋಮುಭಾವನೆ ಕೆರಳಿಸುವುದು ಸರಿಯಲ್ಲ. ಇದರಲ್ಲಿ ಸಂಯಮ ಕಾಪಾಡಿಕೊಳ್ಳುವಂತೆ ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!