ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಬೆಳಗಾವಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಖುದ್ದಾಗಿ ಆಲಿಸುವುದಾಗಿ ಹಾಗೂ ಸರ್ಕಾರದಿಂದ ಯಾವ ರೀತಿಯ ನೆರವು ನೀಡಬಹುದು ಎಂಬುದನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಕಬ್ಬಿಗೆ ಕನಿಷ್ಠ ಮಾರಾಟ ಬೆಲೆ ಹೆಚ್ಚಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ರಸ್ತೆ ತಡೆ ಚಳವಳಿ ತೀವ್ರಗೊಂಡ ಬೆನ್ನಲ್ಲೇ ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ‘ನಮ್ಮ ಕಬ್ಬು ಬೆಳೆಗಾರರು ಅತ್ಯಂತ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ ಮತ್ತು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ನಾನು ಬೆಳಗಾವಿಗೆ ತೆರಳಿ ರೈತರೊಂದಿಗೆ ನೇರವಾಗಿ ಮಾತನಾಡಲಿದ್ದೇನೆ. ಅವರ ಪರಿಸ್ಥಿತಿಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ, ಆದರೆ ಇದರಲ್ಲಿ ಹಲವು ತಾಂತ್ರಿಕ ವಿಚಾರಗಳು ಅಡಗಿವೆ. ಅವರ ಅಹವಾಲುಗಳನ್ನು ಕೇಳಿ, ಸರ್ಕಾರದಿಂದ ಯಾವ ನೆರವು ನೀಡಲು ಸಾಧ್ಯವೋ ಅದನ್ನು ಮಾಡುತ್ತೇವೆ’ ಎಂದರು. ಅಲ್ಲದೆ, ಇದು ಕೇವಲ ನಮ್ಮ ರಾಜ್ಯಕ್ಕೆ ಸೀಮಿತವಾದ ಸಮಸ್ಯೆಯಲ್ಲ, ರಾಷ್ಟ್ರ ಮಟ್ಟದ ಸಮಸ್ಯೆಯಾಗಿದೆ ಎಂದೂ ಅವರು ಅಭಿಪ್ರಾಯಪಟ್ಟರು.
ರೈತರ ಬೇಡಿಕೆಗಳೇನು?
ಬೆಳಗಾವಿ ಜಿಲ್ಲೆಯ ಗೋಕಾಕ್, ಮೂಡಲಗಿ, ಗಿರ್ಲಾಪುರ, ಮುನ್ನೊಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಪ್ರಮುಖ ಬೇಡಿಕೆಗಳೆಂದರೆ, ಪ್ರತಿ ಟನ್ ಕಬ್ಬಿಗೆ 5,500 ರೂ. ನಿಗದಿಪಡಿಸಬೇಕು ಹಾಗೂ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು (MSP) ಪ್ರತಿ ಕೆಜಿಗೆ 60 ರೂ. ಕ್ಕೆ ಏರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ರೈತರು ಆಗ್ರಹಿಸುತ್ತಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿ
ಈ ನಡುವೆ, ಇಡೀ ಬೆಳವಣಿಗೆಯ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಾಂತ್ರಿಕ ವಿವರಣೆಯನ್ನು ನೀಡುತ್ತಾ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರವು ರೈತರಿಗೆ ನೇರವಾಗಿ ಸಿಗುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (FRP) ಈಗಾಗಲೇ ಹೆಚ್ಚಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮಿಲ್ಗಳು 31 ರೂ. ಕ್ಕಿಂತ ಕಡಿಮೆ ಬೆಲೆಗೆ ಮಾರಬಾರದು ಎಂಬುದು ಕನಿಷ್ಠ ಬೆಲೆಯ ಅರ್ಥ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ 49 ರಿಂದ 50 ರೂ. ಕ್ಕೆ ಸಕ್ಕರೆ ಮಾರಾಟವಾಗುತ್ತಿದೆ. ಹೀಗಿರುವಾಗ ಕನಿಷ್ಠ ಬೆಲೆ ಹೆಚ್ಚಳಕ್ಕೆ ಒತ್ತಾಯಿಸುವ ಅಗತ್ಯ ಎಲ್ಲಿದೆ? ಎಂದು ಜೋಶಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:
ಮುಂದುವರಿದು ಮಾತನಾಡಿದ ಅವರು, ದೇಶದ 5 ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ರೈತರಿಗೆ ಹೆಚ್ಚುವರಿ ರಾಜ್ಯ ಸಲಹಾ ಬೆಲೆಯನ್ನು (SAP) ಘೋಷಿಸಿವೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾತ್ರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೆ, ಕೇವಲ ಕೇಂದ್ರ ಸರ್ಕಾರ ಮತ್ತು ನನ್ನ ವಿರುದ್ಧ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು. ಆದರೂ ರೈತರು ನಮ್ಮವರೇ ಆಗಿರುವುದರಿಂದ, ಹುಬ್ಬಳ್ಳಿಗೆ ಬಂದಿದ್ದ ರೈತ ಪ್ರತಿನಿಧಿಗಳಿಗೆ ದೆಹಲಿಗೆ ಬಂದು ಬಹು-ಸಚಿವಾಲಯಗಳ ಮಟ್ಟದಲ್ಲಿ ಮಾತುಕತೆ ನಡೆಸುವಂತೆ ತಾವು ಆಹ್ವಾನ ನೀಡಿರುವುದಾಗಿ ಹಾಗೂ ಅವರ ಮನವಿ ಮೇರೆಗೆ ಕೇಂದ್ರವು ಸಮಿತಿ ರಚಿಸಿದೆ ಎಂದೂ ಅವರು ತಿಳಿಸಿದ್ದಾರೆ.



