ಹೊಸದಿಗಂತ ವರದಿ,ಕಲಬುರಗಿ :
ರಾಯಚೂರಿನ ಜಿಲ್ಲಾ ನ್ಯಾಯಾಲಯದಲ್ಲಿ 26ರಂದು ನಡೆದ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಸಂದರ್ಭದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದರೆ ಮಾತ್ರ ಧ್ವಜಾರೋಹಣ ನೆರವೇರಿಸವುದಾಗಿ ತಿಳಿಸಿದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಕೂಡಲೇ ನ್ಯಾಯಾಧೀಶರ ಸ್ಥಾನದಿಂದ ವಜಾಗೊಳಿಸಬೇಕೆಂದು ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಹಿರಿಯ ಮುಖಂಡ ವಿಠ್ಠಲ್ ದೊಡ್ಡಮನಿ ಅವರು ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರು ದೇಶದಲ್ಲೆ ಅಲ್ಲದೇ ಇಡೀ ವಿಶ್ವದಲ್ಲಿಯೂ ಪ್ರಚಲಿತವಾಗಿ ಅಧ್ಯಯನಕ್ಕೆ ಒಳಪಡುವ ಮಹಾನ ವ್ಯಕ್ತಿಯಾಗಿದ್ದಾರೆ. ದೇಶದ ಪವಿತ್ರ ಸಂವಿಧಾನವೂ ಸಹ ಅವರು ರಚಿಸಿದ್ದಾರೆ. ಅಂತಹ ನಾಯಕರಿಗೆ ಕಾನೂನುನಿನ ಸಂರಕ್ಷಕರಾಗಿ ಕಾರ್ಯ ನಿರ್ವಹಿಸುವ ಒಬ್ಬ ನ್ಯಾಯಾಧೀಶರು ಈ ತರಹ ಕೃತ್ಯ ಎಸೆಗಿರುವುದು ಖಂಡನೀಯ, ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಡಾ. ಮಲ್ಲೇಶಿ ಸಜ್ಜನ್ ಅವರು ಮಾತನಾಡಿ, ಸಂವಿಧಾನವನ್ನು ರಕ್ಷಿಸುವ ಹಾಗೂ ಜನರಿಗೆ ನ್ಯಾಯ ದೊರಕಿಸುವಲ್ಲಿ ನೈಜ ಪಾತ್ರ ವಹಿಸುವ ನ್ಯಾಯಾಧೀಶರೇ ಡಾ. ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ನಿಜಕ್ಕೂ ದುದೈವದ ಸಂಗತಿಯಾಗಿದೆ, ಈ ರೀತಿಯ ಅವರ ವರ್ತನೆ ಕಂಡರೇ ತುಳಿತಕ್ಕೆ ಒಳಗಾದ ಸಮುದಾಯದವರಿಗೆ ಹೇಗೆ ತಾನೇ ನ್ಯಾಯ ಕೊಡಿಸಬಲ್ಲರು ಎಂದು ಪ್ರಶ್ನಿಸಿದ ಅವರು, ಮತೀಯವಾದಿ ಇಂತಹ ನ್ಯಾಯವಾದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಡ ಹೇರಿದರು.
ಅಲ್ಲದೇ ಅದೇ ರೀತಿಯಾಗಿ ನಗರದ ಡಿಎಆರ್ ಮೈದಾನದಲ್ಲಿ ಧ್ವಜಾರೋಹಣ ವೇಳೆ ಮಹಾತ್ಮಾ ಗಾಂಧೀಜಿ ಹಾಗೂ ಡಾ. ಬಿ.ಆರ್ ಅಮಬೇಡ್ಕರ್ ಅವರ ಭಾವಚಿತ್ರ ಇಡದೇ ಅಪಮಾನ ಮಾಡಿದ್ದಾರೆ. ಈ ಕುರಿತಾಗಿ ಪ್ರಶ್ನಿಸಿದಾಗ ಒಬ್ಬ ಜವಾಬ್ದಾರಿಯುತ ಉಸ್ತುವಾರಿ ಮಂತ್ರಿ ಮುರುಗೇಶ್ ನಿರಾಣಿ ಅವರು ಉಡಾಫೆ ಉತ್ತರ ನೀಡಿರುವುದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ರೀತಿಯ ಕೃತ್ಯಗಳು ದಿನನಿತ್ಯ ನಡೆಯುತ್ತಿವೆ, ಇದರ ಬೆನ್ನ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದ ಅವರು ರಾಯಚೂರು ಹಾಗೂ ಕಲಬುರಗಿಯಲ್ಲಿ ನಡೆದ ಆಘಾತಕಾರಿ ಘಟನೆಗಳಿಗೆ ಕಾರಣೀಕರ್ತರಾದವರ ವಿರುದ್ಧ ಕೇಸ್ ದಾಖಲಿಸಿ ಅವರು ಅಲಂಕರಿಸುವ ಸ್ಥಾನದಿಂದ ಕೂಡಲೆ ವಜಾ ಮಾಡಬೇಕೆಂದು ಡಾ. ಮಲ್ಲೇಶಿ ಸಜ್ಜನ ಅವರು ಆಗ್ರಹಿಸಿದರು.
ಜ.31 ರಂದು ಪ್ರತಿಭಟನೆ: ಒಂದು ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳದಿದ್ದರೆ ಇದೇ 31ರಂದು ಕಲಬುರಗಿ ನಗರದಲ್ಲಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅರ್ಜುನ ಭದ್ರೆ, ಮರೆಪ್ಪ ಹಳ್ಳಿ, ಸುರೇಶ ಹಾದಿಮನಿ, ಎ. ಬಿ ಹೊಸಮನಿ, ದೇವೇಂದ್ರ ಸಿನೂರ, ಪ್ರಕಾಶ ಮೂಲಭಾರತಿ, ಸಂತೋಷ ಮೇಲಿನಮನಿ ಹಲವರು ಹಾಜರಿದ್ದರು.