ಮತದಾರರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು: ಸಚಿವ ಎನ್.ಮುನಿರತ್ನ

ಹೊಸದಿಗಂತ ವರದಿ,ಚಿತ್ರದುರ್ಗ:

ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿರುವುದರಿಂದ ಮತದಾರರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ದಿ ಮಾಡುವ ಜವಾಬ್ದಾರಿ ಆಯಾ ಶಾಸಕರುಗಳ ಮೇಲಿದೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದರು.
ನಗರದ ಬಿಜೆಪಿ ಕಚೇರಿಗೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಸಾರ್ವಜನಿಕರು ಅಭಿವೃದ್ದಿಯ ನಿರೀಕ್ಷೆಯಲ್ಲಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಒಂದು ವರ್ಷವಿರುವುದರಿಂದ ಕ್ಷೇತ್ರಗಳ ಅಭಿವೃದ್ದಿ ಮಾಡದಿದ್ದರೆ ತಪ್ಪು ಸಂದೇಶ ಹೋಗುತ್ತದೆ ಎಂದರು.
ತೋಟಗಾರಿಕಾ ಇಲಾಖೆಯಿಂದ ಸಿಗಬಹುದಾದ ಸವಲತ್ತುಗಳನ್ನು ರೈತರಿಗೆ ಹಾಗೂ ಜನಸಾಮಾನ್ಯರಿಗೆ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮುಂಬರುವ ಚುನಾವಣೆಗೆ ಜನರ ಬಳಿ ಹೋಗಿ ಮತ ಕೇಳಲು ಸುಲಭವಾಗುತ್ತದೆ ಎಂದು ಸಲಹೆ ಮಾಡಿದರು.
ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಮುಖಂಡರುಗಳು ಏನೇ ಕೆಲಸ ಹೇಳಿದರೂ ನನ್ನ ಕಡೆಯಿಂದ ಮಾಡಲು ಬದ್ದನಾಗಿದ್ದೇನೆ. ಉಳಿದಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸುತ್ತೇನೆ. ಮುಂದಿನ ಎಲ್ಲಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ತಿಳಿಸಿದರು.
ಚಿತ್ರದುರ್ಗ ವಿಧಾನಸಭೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಮ್ಮ ಕ್ಷೇತ್ರದಲ್ಲಿ ಒಳ್ಳೆಯ ಹಿಡಿತವಿಟ್ಟುಕೊಂಡಿರುವುದರಿಂದ ಮುಂದಿನ ಚುನಾವಣೆಯಲ್ಲೂ ಅವರೆ ಗೆಲುವುದು ನಿಶ್ಚಿತ. ಆದರೆ ಬಹುಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಮುಖಂಡರುಗಳಿಗೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಬಿಜಾಪುರ ಬಿಟ್ಟರೆ ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುವುದು. ಹಾಗಾಗಿ ಹಣ್ಣು ಮತ್ತು ತೋಟಗಾರಿಕಾ ಬೆಳೆಗಳನ್ನು ಕೆಡದಂತೆ ಸಂರಕ್ಷಿಸಿಟ್ಟುಕೊಳ್ಳಲು ಕೋಲ್ಡ್ ಸ್ಟೋರೇಜ್ ನಿರ್ಮಿಸಬೇಕೆಂದು ತೋಟಗಾರಿಕಾ ಸಚಿವರಲ್ಲಿ ಮನವಿ ಮಾಡಿ ಇಲಾಖೆಯ ಅಧಿಕಾರಿಗಳು ರೈತರ ಹೊಲಗಳಿಗೆ ಹೋಗಿ ಅಲ್ಲಿನ ಸಮಸ್ಯೆಗಳನ್ನು ಆಲಿಸುವುದಿಲ್ಲ. ರೈತರಿಗೆ ಉತ್ತೇಜನ ನೀಡುವ ಕೆಲಸವಾಗಬೇಕು. ದಾವಣಗೆರೆಯಲ್ಲಿರುವಂತೆ ಚಿತ್ರದುರ್ಗದಲ್ಲಿಯೂ ಗ್ಲಾಸ್‌ಹೌಸ್ ತೆರೆಯಬೇಕೆಂದು ಸಚಿವರಲ್ಲಿ ವಿನಂತಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ಜಿಲ್ಲೆಯ ರೈತರು ದಾಳಿಂಬೆ, ಪಪ್ಪಾಯಿ, ಮೋಸಂಬಿ, ಸಪೋಟ, ಅಂಜುರ, ಬಾಳೆ ಬೆಳೆದು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಅತಿ ಹೆಚ್ಚು ಹಣ್ಣುಗಳನ್ನು ಬೆಳೆಯುವ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಕೋಲ್ಡ್‌ಸ್ಟೋರೇಜ್ ಅತ್ಯಗತ್ಯವಾಗಿ ಆಗಬೇಕೆಂದು ಸಚಿವ ಮುನಿರತ್ನರವರಲ್ಲಿ ಕೋರಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ಉಪಾಧ್ಯಕ್ಷ ಕಲ್ಲೇಶಯ್ಯ, ನಗರಾಧ್ಯಕ್ಷ ನವೀನ್ ಚಾಲುಕ್ಯ, ಖಜಾಂಚಿ ಎಸ್.ಆರ್.ಗಿರೀಶ್, ಕಾರ್ಯದರ್ಶಿ ನರೇಂದ್ರ, ವಕ್ತಾರ ನಾಗರಾಜ್ ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ಶಿವಣ್ಣಾಚಾರ್, ಜಿಲ್ಲಾ ಕಾರ್ಯದರ್ಶಿ ಎ.ರೇಖಾ, ನಗರ ಕಾರ್ಯದರ್ಶಿ ಶೀಲ ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!