ದೇಶದಲ್ಲಿ ಕಮಲ ಮತ್ತೊಮ್ಮೆ ಅರಳಲಿದೆ: ಡಿ.ಪ್ರಕಾಶ್ ವಿಶ್ವಾಸ

ಹೊಸದಿಗಂತ ವರದಿ,ಬಳ್ಳಾರಿ:

ಕೈ‌ ನಾಯಕರು ಎಷ್ಟೇ ತಿಪ್ಪರಲಾಗ್ ಹಾಕಿದರೂ ರಾಜ್ಯ ಹಾಗೂ ದೇಶದಲ್ಲಿ ಮತ್ತೋಮ್ಮೆ ಕಮಲ ಅರಳಲಿದೆ ಎಂದು ಬಿಜೆಪಿ ಓಬಿಸಿ ಮೋರ್ಚಾದ ನೂತನ ಜಿಲ್ಲಾಧ್ಯಕ್ಷ ಡಿ.ಪ್ರಕಾಶ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಓಬಿಸಿ ಮೋರ್ಚಾದ ಜಿಲ್ಲಾ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು. ಕಾಂಗ್ರೆಸ್ ದೇಶದ ಜನರ ವಿಶ್ವಾಸ ಕಳೆದುಕೊಂಡಿದೆ, ಮಾತೆತ್ತಿದರೇ ಸುಳ್ಳಿನ ಸಾಮ್ರಾಜ್ಯ, ಅವರ ಅಭಿವೃದ್ಧಿ ಕೆಲಸಗಳು ಕಡತಗಳಲ್ಲಿ ಮಾತ್ರ, ಸಭೆ ಸಮಾರಂಭಗಳಲ್ಲಿ ಮಾತ್ರ ಕಾಣುವ ಕೈ ನಾಯಕರಿಂದ ಅಭಿವೃದ್ಧಿ ‌ನಿರೀಕ್ಷಿಸಲು ಅಸಾಧ್ಯ ಎಂದು ಜನರು ನಿರ್ಧರಿಸಿದ್ದು, ರಾಜ್ಯ ಹಾಗೂ ದೇಶದಲ್ಲಿ ‌ಬಿಜೆಪಿ ಸರ್ಕಾರ ಮತ್ತೋಮ್ಮೆ ಅಧಿಕಾರಕ್ಕೆ ಬರಲಿದೆ. ಕೈ ನಾಯಕರು ನಾವು ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಹಗಲು ‌ಕನಸು ಕಾಣುತ್ತಿದ್ದಾರೆ, ಪಂಚ ರಾಜ್ಯಗಳ ಚುನಾವಣೆಯಲ್ಲಿ ಕೈ ನಾಯಕರಿಗೆ ನಡುಕು ಶುರುವಾಗಿದೆ, ಸೋಲಿನ ಭೀತಿ ಎದುರಾಗಿದೆ, ಈ ಐದೂ ರಾಜ್ಯಗಳ ಚುನಾವಣೆಯಲ್ಲಿ ‌ಬಿಜೆಪಿ‌ ಜಯಭೇರಿ ಬಾರಿಸಲಿದೆ. ನಮ್ಮ ಕೇಂದ್ರ ಸರ್ಕಾರದ ಸಾಧನೆಗಳೇ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿಜೀ ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ಎಲ್ಲ ವರ್ಗಗಳಿಗೂ ಅನುಕೂಲವಾಗುವ ಅನೇಕ ಯೋಜನೆಗಳನ್ನು ‌ಜಾರಿಗೆ ತಂದಿದ್ದಾರೆ, ಅವಧಿಯಲ್ಲಿ ದೇಶದ ಅಭಿವೃದ್ಧಿ ಬದಲಾಗಿದೆ, ನಿತ್ಯದ 24ಗಂಟೆಯಲ್ಲಿ 18 ಗಂಟೆ ಬಿಡುವಿಲ್ಲದೇ ಕೆಲಸ ನಿರ್ವಹಿಸುವ ಏಕೈಕ ಮಾದರಿ ಪ್ರಧಾನ ಮಂತ್ರಿಗಳು ಎನ್ನುವ ಹೆಗ್ಗಳಿಕೆ ಪಡೆದಿದ್ದಾರೆ. ಅಕ್ರಮ ದಂಧೆಕೋರರಿಗೆ ಸಿಂಹ ಸ್ವಪ್ನವಾಗಿರುವ ಮೋದಿಜೀ ಅವರು ಅನೇಕ ಕಠಿಣ‌ ನಿರ್ಧಾರಗಳನ್ನು ತೆಗೆದುಕೊಳ್ಳುವ ‌ಮೂಲಕ ಬಿಸಿ ಮುಟ್ಟಿಸಿದ್ದಾರೆ, ಇದರಿಂದ ಕೇಂದ್ರದ ಆದಾಯವು ಹೆಚ್ಚಾಗಿದೆ. ಇಲ್ಲಿವರೆಗೆ ಬಡವರಿಗೆ, ರೈತರಿಗೆ, ಮಹಿಳೆಯರಿಗೆ, ವೃದ್ಧರಿಗೆ ಸೇರಿ ಎಲ್ಲ ವರ್ಗದವರಿಗೂ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಮಾದರಿಯಾಗಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ ಅವರು‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮೋದಿಜೀ‌ ಅವರು ವ್ಯಕ್ತಿಯಲ್ಲ, ಅವರೋಬ್ಬ ದೇಶದ ಶಕ್ತಿಯಾಗಿದ್ದಾರೆ, ಮೋದಿ ಅವರ ಅನೇಕ ನಾನಾ ಮಾದರಿ ಯೋಜನೆಗಳ ಅನುಷ್ಠಾನಕ್ಕೆ ‌ಕಾಂಗ್ರೆಸ್ ಶಕ್ತಿ ರಾಜ್ಯದಲ್ಲಿ ಅಷ್ಟೇ ಅಲ್ಲ, ದೇಶದಲ್ಲೇ ಕಳೆದುಕೊಂಡಿದೆ. ರಾಜ್ಯದಲ್ಲಿ ಕೈ ನಾಯಕರು ಎಷ್ಟೇ ತಿಪ್ಪರಲಾಗ್ ಹಾಕಿದರೂ ಅಧಿಕಾರಕ್ಕೆ‌ ಬರೋಲ್ಲ, ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲಿಸಿದರಂತೆ ಎನ್ನುವ ರೀತಿಯಲ್ಲಿ ಕೈ ನಾಯಕರು, ಇನ್ನು ಚುನಾವಣೆ ಘೋಷಣೆಯಾಗಿಲ್ಲ, ಫಲಿತಾಂಶ ಪ್ರಕಟವಾಗಿಲ್ಲ, ಈಗಲೇ ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ‌ ನಡೆಸಿದ್ದಾರೆ, ಡಿಕೇಶಿ ನಾನು ಅಂದರೇ, ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರು‌ ನಾನೇ ಸಿ.ಎಂ.ಆಗತ್ತೇನೆ ಅಂತಾರೆ, ಹಿಂದುಳಿದವರಿಗೆ ಅವಕಾಶ ಕಲ್ಪಿಸಿಲ್ಲ, ನೀವೆಲ್ಲರೂ‌ ಬೆಂಬಲಿಸಿ ನಾನೇ ಸಿ.ಎಂ.ಆಗತ್ತೇನೆ ಎಂದು ಡಾ.ಜಿ.ಪರಮೇಶ್ವರ್ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಕೇಂದ್ರ ಹಾಗೂ‌ ರಾಜ್ಯ ಸರ್ಕಾರದ ಜನಪರ ಯೋಜನೆಗಳೇ ಬಿಜೆಪಿಗೆ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿದ್ದು, ಮತ್ತೋಮ್ಮೆ ಕಮಲ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಳ್ಳಾರಿ ವಿಭಾಗ್ ‌ಪ್ರಭಾರಿ ಉಮೇಶ್ ಸಜ್ಜನ್, ವಿಭಾಗ್ ಪ್ರಭಾರಿ ತಿಪ್ಪಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನೀಲ್‌ ನಾಯ್ಡು, ಶಿವಶಂಕರ್ ರೆಡ್ಡಿ, ಒಬಿಸಿ ಪ್ರದಾನ ಕಾರ್ಯದರ್ಶಿ ಧನಂಜಯ್ ಹಮಲ್, ಯಲಿಗೆರ್ ವೆಂಕಟೇಶ ಸೇರಿದಂತೆ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಓಬಳೇಶ್, ಗಾಳಿ ಶಂಕ್ರಪ್ಪ, ರಾಮಕೃಷ್ಣ, ಅಂಜಿ‌ ಕಮ್ಮರ್ ಚೆಡು ಸೇರಿದಂತೆ ಜಿಲ್ಲಾ ಕಾರ್ಯಕಾರಣಿ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!