ತಣ್ಣೀರುಬಾವಿ ಬೀಚ್ ಬಳಿ ವಿದ್ಯಾರ್ಥಿಗಳ ಮೇಲೆ ಲಾಠಿ ಏಟು ನೀಡಿದ ಪೊಲೀಸ್ ಸಿಬ್ಬಂದಿ ಸುನಿಲ್ ಅಮಾನತು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಣ್ಣೀರುಬಾವಿ ಬೀಚ್ ಬಳಿ ಸಂಚಾರ ದಟ್ಟಣೆ ಉಂಟಾದ ಹಿನ್ನೆಲೆಯಲ್ಲಿ ಅಲ್ಲಿ ಸೇರಿದ್ದ ಯುವಕರ ಹಾಗೂ ವಿದ್ಯಾರ್ಥಿಗಳ ಮೇಲೆ ಲಾಠಿ ಏಟು ನೀಡಿ, ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಠಾಣೆಯ ಪೊಲೀಸ್ ಸಿಬ್ಬಂದಿ ಸುನಿಲ್ ಎಂಬವರನ್ನು ಅಮಾನತುಗೊಳಿಸಲಾಗಿದೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಣ್ಣೀರಬಾವಿ ಘಟನೆಗೆ ಸಂಬಂಧಿಸಿದಂತೆ ಸಿಬ್ಬಂದಿ ಸುನಿಲ್ ಅವರನ್ನು ಅಮಾನತುಗೊಳಿಸಲಾಗಿದ್ದು, ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಘಟನೆ ಕುರಿತು ಪೋಷಕರು ಅಥವಾ ಬಾಲಕನಿಂದಾಗಲಿ ಯಾವುದೇ ದೂರು ಬಂದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಜ.1 ರಂದು ಘಟನೆ ನಡೆದಿದ್ದು, ವೀಕೆಂಡ್ ಮತ್ತು ಹೊಸ ವರ್ಷವಾದ್ದರಿಂದ ತಣ್ಣೀರುಬಾವಿ ಬೀಚ್‌ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದ್ದು, ಈ ವೇಳೆ ಅಲ್ಲಿ ಸಂಚಾರ ದಟ್ಟಣೆ ಆಗಿತ್ತು. ಈ ಕಾರಣಕ್ಕೆ ಕ್ರಿಕೆಟ್ ಆಟವಾಡಿ ಬೈಕಿನಲ್ಲಿ ತೆರಳುತ್ತಿದ್ದ ಯುವಕರ ಮೇಲೆ ಹಾಗೂ 6 ನೇ ತರಗತಿಯ ವಿದ್ಯಾರ್ಥಿ ಹಾಗೂ ಪಿಯು ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಬೀಸಿದ್ದರು. ಇದರಿಂದಾಗಿ ವಿದ್ಯಾರ್ಥಿಯೊಬ್ಬ ಗಂಭೀರ ಗಾಯಗೊಂಡಿದ್ದ. ಈ ಬಗ್ಗೆ ಸ್ಥಳದಲ್ಲೇ ಪೊಲೀಸರನ್ನು ಸಾರ್ವಜನಿಕರು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದರು.
ಪೊಲೀಸರು ನಡೆಸಿದ ಹಲ್ಲೆಯಿಂದ ಬಾಲಕ ತೀವ್ರ ಅಸ್ವಸ್ಥಗೊಂಡು ಪ್ರಜ್ಞಾಹೀನನಾಗಿದ್ದ. ಆತನ ಮೈ ಕೈಗಳಲ್ಲಿ ಲಾಠಿ ಏಟಿನಿಂದ ಬಾಸುಂಡೆ ಎದ್ದಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ವಯಂ ಆಗಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!