ವಸಾಹತುಶಾಹಿ ಕ್ರೌರ್ಯ: ಬರೋಬ್ಬರಿ 61 ವರ್ಷಗಳ ಬಳಿಕ ‘ಪ್ರಧಾನಿ’ ಅಂತ್ಯಕ್ರಿಯೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಬಿಳಿಯರ ದಬ್ಬಾಳಿಕೆಗೆ ಒಳಗಾಗಿ ಆಫ್ರಿಕಾದಲ್ಲಿ ಅದೆಷ್ಟೋ ಹತ್ಯೆಗಳು ನಡೆದಿವೆ. ಅಂಥವುಗಳಲ್ಲಿ ಜಗತ್ತನ್ನೇ ನಡುಗಿಸಿದ್ದ ಕಾಂಗೋದ ಮಾಜಿ ಪ್ರಧಾನಿ ಪ್ಯಾಟ್ರೀಸ್‌ ಲುಮಾಂಬಾರ ಹತ್ಯೆಯೂ ಒಂದು. ಬೆಲ್ಜಿಯಂ ವಸಾಹತುಶಾಹಿಗಳ ಕೈಗೆ ಸಿಕ್ಕು ಚಿತ್ರಹಿಂಸೆ ಅನುಭವಿಸಿದ್ದ ಕಾಂಗೋದ ಪ್ರಧಾನಿ ಅನುಮಾನಾಸ್ಪದವಾಗಿ ಬೆಲ್ಜಿಯಂನಲ್ಲಿ ಹತ್ಯೆಗೀಡಾಗಿದ್ದರು. ಅವರ ಮೃತದೇಹವೂ ಕೂಡ ಪತ್ತೆಯಾಗಿರಲಿಲ್ಲ. ಅವರ ಮೃತ ದೇಹದ ಅವಶೇಷಗಳನ್ನು ʼಬೇಟೆಯ ಪ್ರಶಸ್ತಿʼ ಎಂಬಂತೆ ಬೆಲ್ಜಿಯಂನ ಅಧಿಕಾರಿಯೊಬ್ಬ ಉಳಿಸಿಕೊಂಡಿದ್ದ. ಪ್ರಸ್ತುತ ಅವರ ಹತ್ಯೆಯ 61 ವರ್ಷಗಳ ನಂತರ ಅವರ ಅವಶೇಷಗಳನ್ನು ಕುಟುಂಬಕ್ಕೆ ಹಿಂದಿರುಗಿಸಲಾಗಿದೆ.

ಅವರ ಹತ್ಯೆಯ ನಂತರ ʼಬೇಟೆಯ ಟ್ರೋಫಿʼಯಾಗಿ ಉಳಿಸಿಕೊಳ್ಳಲಾಗಿದ್ದ ಅವರ ಚಿನ್ನದ ಹಲ್ಲನ್ನು ಕ್ಷಮೆಯೊಂದಿಗೆ ಬೆಲ್ಜಿಯಂ ಸರ್ಕಾರವು ಅವರ ಕುಟುಂಬಕ್ಕೆ ಹಿಂತಿರುಗಿಸಿದೆ.

ಬೆಲ್ಜಿಯಂನಲ್ಲಿ ಬಂಧನಕ್ಕೊಳಗಾಗಿದ್ದ ಡಿಆರ್‌ಸಿಯ ಸ್ವಾತಂತ್ರ್ಯ ವೀರ ಪ್ಯಾಟ್ರಿಸ್ ಲುಮುಂಬಾ ಹಾಗೂ ಅವರ ಇಬ್ಬರು ಕ್ಯಾಬಿನೇಟ್‌ ಮಂತ್ರಿಗಳು 1961ರಲ್ಲಿ ಹತರಾಗಿದ್ದರು. ಬೆಲ್ಜಿಯನ್ ಪೋಲೀಸ ಕಮೀಷನರ್‌ ಗೆರಾರ್ಡ್ ಸೂಟೆ ಎಂಬಾತನ ಆದೇಶದ ಮೇರೆಗೆ ಫೈರಿಂಗ್‌ ಸ್ಕ್ವಾಡ್‌ ಸಾಕ್ಷಯಾಧಾರಗಳು ಸಿಗದಂತೆ ಅವರನ್ನು ಸಾಯಿಸಿತ್ತು. ಅಲ್ಲಿಂದ ಅವರ ಮೃತ ದೇಹವನ್ನು ಕಣ್ಮರೆಮಾಡಲಾಯಿತು. ಮೊದಲು ಹೆಚ್ಚು ಆಳವಿಲ್ಲದ ಸಮಾಧಿಯೊಳಗೆ ಹೂತು ನಂತರ ಅದನ್ನು ಪುನಃ ಹೊರತೆಗೆದು 200 ಕಿಮೀ ಸಾಗಿಸಲಾಯಿತು. ದೇಹವನ್ನು ಛಿದ್ರಗೊಳಿಸಿ ಸಲ್ಫ್ಯೂರಿಕ್‌ ಆಸಿಡ್‌ನಲ್ಲಿ ಹಾಕಿ ದೇಹವನ್ನು ಕರಗಿಸಲಾಯಿತು. ಅದರೆ ಅವರ ಎರಡು ಚಿನ್ನದ ಹಲ್ಲುಗಳು ಹಾಗೂ ಎರಡು ಬೆರಳುಗಳನ್ನು ಪೋಲೀಸ್‌ ಅಧಿಕಾರಿ ಸೂಟೆ ಹಾಗೇ ಉಳಿಸಿಕೊಂಡಿದ್ದರು ಎಂದು ವರದಿಗಳಾಗಿದ್ದವು. ಆದರೆ ಅವು ಎಲ್ಲಿವೆ ಎಂದು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಹತ್ಯೆಗೆ ಆದೇಶ ನೀಡಿದ್ದ ಅಧಿಕಾರಿ ಸೂಟೆ 1999ರ ಸಾಕ್ಷ್ಯಚಿತ್ರವೊಂದರಲ್ಲಿ ಲುಮಾಂಬಾ ಅವರನ್ನು ʼನರಕಕ್ಕೆ ಅಟ್ಟಿದʼಪರಿಯನ್ನು ಶೌರ್ಯವೆಂಬಂತೆ ವಿವರಿಸಿದ್ದರು. ಲುಮಾಂಬಾ ಅವರಿಗೆ ಸರಿಯಾದ ಅಂತ್ಯಕ್ರಿಯೆಯನ್ನೂ ಮಾಡಲು ಸಾಧ್ಯವಾಗಿರಲಿಲ್ಲ.

ಪ್ರಸ್ತುತ ಅವರ ಹಲ್ಲುಗಳನ್ನು ಬೆಲ್ಜಿಯಂ ಸರ್ಕಾರ ಕ್ಷಮೆಯಾಚಿಸುವುದರೊಂದಿಗೆ ಲುಮಾಂಬಾರ ಕುಟುಂಬಕ್ಕೆ ಹಿಂದಿರುಗಿಸಿದೆ. ಅವರ ಮರಣದ 61 ವರ್ಷದ ನಂತರ ಕಿನ್ಶಾಸಾದಲ್ಲಿ ಅವರ ಅಧಿಕೃತ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!