September 27, 2026
Sunday, September 27, 2026
spot_img

‘ಬೆಳಗಾವಿ ರಾಜಾ’ನ ಶೋಭಾಯಾತ್ರೆಯ ಮೆರುಗು ಹೆಚ್ಚಿಸಿದ ಆಯುಕ್ತರು, ಉಪಮಹಾಪೌರರು: ಡೋಲ್-ತಾಶಾ ತಾಳಕ್ಕೆ ಹೆಜ್ಜೆ!

ಹೊಸದಿಗಂತ, ಬೆಳಗಾವಿ:


ಕಳೆದ 42 ಗಂಟೆಗಳಿಂದ ಕುಂದಾ ನಗರಿ ಬೆಳಗಾವಿಯಲ್ಲಿ ಅತಿ ವಿಜೃಂಭಣೆಯಿಂದ ಜರುಗುತ್ತಿದ್ದ ಗಣೇಶ ವಿಸರ್ಜನಾ ಮಹೋತ್ಸವಕ್ಕೆ ಭಾನುವಾರ ಅತ್ಯಂತ ಶ್ರದ್ಧೆ ಹಾಗೂ ವೈಭವದೊಂದಿಗೆ ತೆರೆಬಿದ್ದಿದೆ.


ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನೆಯೊಂದಿಗೆ ನಗರದ ಐತಿಹಾಸಿಕ ಹಬ್ಬದ ಮೆರವಣಿಗೆಯು ಅಧಿಕೃತವಾಗಿ ಪೂರ್ಣಗೊಂಡಿತು. ಈ ಮಹತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಪ್ರತಿ ಕಾಮಕರ್ –ಉಪ ಮೇಯರ್ ಹನುಮಂತ ಕೊಂಗಾಲಿ, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ ಎಂ., ಅಭಿಯಂತೆ ಲಕ್ಷ್ಮೀ ನಿಪ್ಪಾಣಿಕರ, ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ಹಾಗೂ ವಿವಿಧ ನಗರಸೇವಕರು ಉಪಸ್ಥಿತರಿದ್ದು ಭಕ್ತಿಭಾವದಿಂದ ಮಹಾಆರತಿ ನೆರವೇರಿಸಿದರು.


ಆಧಿಕಾರಿಗಳಿಂದ ಡೋಲ್-ತಾಶಾಗೆ ನೃತ್ಯ


ಮಹಾಆರತಿಯ ಬಳಿಕ ನೆರೆದಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಡೋಲ್-ತಾಶಾ ಸದ್ದಿಗೆ ಯುವಸಮೂಹ ರೋಮಾಂಚನಗೊಂಡು ಕುಣಿದು ಕುಪ್ಪಳಿಸಿತು. ಈ ಸಂಭ್ರಮಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾಥ್ ನೀಡಿದ್ದು ವಿಶೇಷವಾಗಿತ್ತು. ಮೇಯರ್ ಪ್ರತಿ ಕಾಮಕರ್ ಉಪ ಮೇಯರ್ ಹನುಮಂತ ಕೊಂಗಾಲಿ, ಆಯುಕ್ತ ಕಾರ್ತಿಕ ಎಂ. ಹಾಗೂ ಅಭಿಯಂತೆ ಲಕ್ಷ್ಮೀ ನಿಪ್ಪಾಣಿಕರ ಸೇರಿದಂತೆ ಹಿರಿಯ ಅಧಿಕಾರಿಗಳು ಡೋಲ್-ತಾಶಾ ತಾಳಕ್ಕೆ ಹೆಜ್ಜೆ ಹಾಕಿ ಹರ್ಷ ವ್ಯಕ್ತಪಡಿಸಿದ್ದು ಭಕ್ತರ ಗಮನ ಸೆಳೆಯಿತು.


ನಗರ ಪೊಲೀಸ್ ಇಲಾಖೆಯ ಬಿಗಿ ಬಂದೋಬಸ್ತ್ ಹಾಗೂ ಭಕ್ತಾದಿಗಳ ಹರ್ಷೋದ್ಗಾರದ ನಡುವೆ ಪ್ರಸಿದ್ಧ ಕಪಿಲೇಶ್ವರ ಹೊಂಡದಲ್ಲಿ ಶ್ರೀ ಗಣೇಶನ ಮೂರ್ತಿಯನ್ನು ಯಶಸ್ವಿಯಾಗಿ ವಿಸರ್ಜಿಸಲಾಯಿತು. ‘ಮುಂದಿನ ವರ್ಷ ಬೇಗ ಬಾ ಗಣಪತಿ’ ಎಂದು ಜಯಘೋಷ ಕೂಗುತ್ತಾ ಭಕ್ತಸಾಗರವು ಗಣಪನಿಗೆ ಭಾವಪೂರ್ಣ ನಮನ ಸಲ್ಲಿಸಿತು.

Must Read