ಉಚಿತ ವಿದ್ಯುತ್​ ಪಡೆಯಲು ಷರತ್ತುಗಳು ಅನ್ವಯ: ಸಚಿವ ಕೆ.ಜೆ.ಜಾರ್ಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್‌ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜೂನ್​ 1ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾರಿ ಮಾಡಿದೆ.

ಗೃಹಜ್ಯೋತಿ ಯೋಜನೆ ಕುರಿತು ಸಾರ್ವಜನಿಕ ವಲಯಗಳಲ್ಲಿ ಹಲವು ಅನುಮಾನಗಳಿದ್ದು, ಈ ಕುರಿತಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್​ ಇಂದು ಸ್ಪಷ್ಟನೆ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಜಾರ್ಜ್​ ರಾಜ್ಯದಲ್ಲಿ 200 ಯೂನಿಟ್​ಗಿಂತ ಕಡಿಮೆ ವಿದ್ಯುತ್​ ಬಳಕೆ ಮಾಡುವ 2.16 ಕೋಟಿ ಜನರಿದ್ದಾರೆ. 2 ಲಕ್ಷಕ್ಕಿಂತ ಹೆಚ್ಚಿನ ಗ್ರಾಹಕರು 200 ಯೂನಿಟ್​ಗಿಂತ ಹೆಚ್ಚಿನ ವಿದ್ಯುತ್​ ಬಳಕೆ ಮಾಡುತ್ತಾರೆ.

ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಸೇವಾಸಿಂಧು ಪೋರ್ಟಲ್​ ಮೂಲಕ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ಪ್ರತ್ಯೇಕ ಆ್ಯಪ್​ ಒಂದನ್ನು ಅಭಿವೃದ್ದಿ ಪಡಿಸಲಾಗುತ್ತಿದೆ. ಸ್ವಂತ ಮನೆ ಅಥವಾ ಬಾಡಿಗೆ ಮನೆ ಇರಲಿ ಅರ್ಜಿ ಸಲ್ಲಿಸುವಾಗ ಕರಾರು ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಷರತ್ತುಗಳು ಅನ್ವಯ

ಹೊಸದಾಗಿ ಮನೆ ಕಟ್ಟಿದವರಿಗೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಾಡಿಗೆ ಮನೆಯಲ್ಲಿ ಇರುವವರಿಗೆ ಈ ಯೋಜನೆ ಸದ್ಯಕ್ಕೆ ಅನ್ವಯವಾಗುವುದಿಲ್ಲ. ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ಸ್ಪಷ್ಟ ಪಡಿಸುತ್ತೇವೆ. ಬೇರೆ ರಾಜ್ಯಗಳಿಂದ ಬಂದು ಇಲ್ಲಿ ವಾಸವಿರುವವರೂ ಈ ಯೋಜನೆಯ ಲಾಭವನ್ನು ಪಡೆಯಬಹುದು. ಆದರೆ ಆಧಾರ್​ ಗುರುತಿನ ಚೀಟಿಯಲ್ಲಿ ಇಲ್ಲಿನ ವಿಳಾಸ ನಮೂದಿಸಿರಬೇಕು ಇಲ್ಲವಾದಲ್ಲಿ ಕಡ್ಡಾಯವಾಗಿ ಕರಾರು ಪತ್ರ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!