July 17, 2026
Friday, July 17, 2026
spot_img

ಗೊಂದಲದ ಗೂಡಾದ ಮೆಟ್ರೋ ದರ: ತಪ್ಪು ಲೆಕ್ಕಾಚಾರದ ನಡುವೆ ಪ್ರಯಾಣಿಕರ ಜೇಬಿಗೆ ಕತ್ತರಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಲೈಫ್‌ಲೈನ್ ಎನಿಸಿಕೊಂಡಿರುವ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ದರ ಏರಿಕೆಯ ಗೊಂದಲದಿಂದ ವಿವಾದಕ್ಕೆ ಈಡಾಗಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL), ಇದೀಗ ಟಿಕೆಟ್ ದರದಲ್ಲಿ ಶೇ. 5ರಷ್ಟು ಹೆಚ್ಚಳ ಮಾಡಲು ತನ್ನ ಬೋರ್ಡ್ ಸಭೆಯಲ್ಲಿ ತೀರ್ಮಾನಿಸಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಮೆಟ್ರೋ ದರವನ್ನು ದಿಢೀರನೆ ಶೇ. 101.5ರಷ್ಟು ಏರಿಕೆ ಮಾಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸಾರ್ವಜನಿಕರ ತೀವ್ರ ಪ್ರತಿರೋಧದಿಂದಾಗಿ ಕೇವಲ ಮೂರೇ ದಿನಗಳಲ್ಲಿ ಈ ಏರಿಕೆಯನ್ನು ಶೇ. 71.5ಕ್ಕೆ ಇಳಿಸಲಾಗಿತ್ತು. ಈ ಘಟನೆಯ ಬಿಸಿ ಆರುವ ಮುನ್ನವೇ ನಿಗಮವು ಮತ್ತೆ ದರ ಏರಿಕೆಗೆ ಮುಂದಾಗಿರುವುದು ಪ್ರಯಾಣಿಕರ ಅಸಮಾಧಾನವನ್ನು ಸ್ಫೋಟಿಸಿದೆ.

ಬಿಎಂಆರ್‌ಸಿಎಲ್ ಬೋರ್ಡ್ ಒಪ್ಪಿಗೆ ನೀಡಿದ್ದರೂ, ದರ ಏರಿಕೆ ಜಾರಿಗೆ ಬರಲು ರಾಜ್ಯ ಸರ್ಕಾರದ ಅಂತಿಮ ಮುದ್ರೆ ಅಗತ್ಯವಾಗಿದೆ. ಅಧಿಕಾರಿಗಳು ಸದ್ಯ ಈ ಅನುಮತಿಗಾಗಿ ಕಸರತ್ತು ನಡೆಸುತ್ತಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವರು ಈ ನಡೆಯನ್ನು ವಿರೋಧಿಸಿದ್ದಾರೆ. “ದರ ನಿಗದಿ ಸಮಿತಿಯನ್ನು ಪುನರ್ ರಚಿಸಬೇಕು ಮತ್ತು ಅಧಿಕಾರಿಗಳ ತಪ್ಪು ಲೆಕ್ಕಾಚಾರ ಸರಿಪಡಿಸುವವರೆಗೆ ವಾರ್ಷಿಕ ದರ ಏರಿಕೆ ಮಾಡಬಾರದು” ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:

“ಮೊದಲು ಮಾಡಿದ ತಪ್ಪು ಲೆಕ್ಕಾಚಾರದ ಏರಿಕೆಯನ್ನೇ ಇಳಿಸಿಲ್ಲ, ಈಗ ಮತ್ತೆ 5% ಏರಿಕೆ ಮಾಡುವುದು ಎಷ್ಟು ಸರಿ?” ಎಂಬುದು ಪ್ರಯಾಣಿಕರ ನೇರ ಪ್ರಶ್ನೆ. ತಪ್ಪುಗಳನ್ನು ಸರಿಪಡಿಸಿದ ನಂತರವಷ್ಟೇ ವಾರ್ಷಿಕ ಏರಿಕೆ ಬಗ್ಗೆ ಯೋಚಿಸಿ ಎಂಬ ಆಗ್ರಹ ಕೇಳಿಬರುತ್ತಿದೆ.

ಪ್ರತಿಭಟನೆ ಮತ್ತು ವಿರೋಧಗಳ ನಡುವೆಯೂ ನಿಗಮವು ತನ್ನ ನಿರ್ಧಾರಕ್ಕೆ ಅಂಟಿಕೊಂಡಿದ್ದು, ಸರ್ಕಾರ ಈ ಬಗ್ಗೆ ಯಾವ ನಿಲುವು ತಳೆಯಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !