ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಜೊತೆಗೂಡಿ ಹಿಜಾಬ್ ಗಲಭೆ ಸೃಷ್ಟಿಸಿವೆ: ನಳಿನ್‍ಕುಮಾರ್ ಕಟೀಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ತಮ್ಮ ಯೋಜನೆಗಳ ಮೂಲಕ ಜನಮೆಚ್ಚುಗೆಯನ್ನು ಮತ್ತು ಜನರ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದರೆ, ಕಾಂಗ್ರೆಸ್ ಪಕ್ಷ ಹಿಜಾಬ್ ಒಳಗೆ ಸೇರಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.

ಜಗನ್ನಾಥ ಭವನದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಜಾಬ್ ಗಲಭೆಯನ್ನು ಪ್ರಾರಂಭಿಸಲು ಎರಡು ಶಕ್ತಿಗಳು ಒಂದುಗೂಡಿವೆ. ಇದರಲ್ಲಿ ಮಾನಸಿಕ ಮತ್ತು ಬೌದ್ಧಿಕ ಚಿಂತನೆ ಕಾಂಗ್ರೆಸ್ ಪಕ್ಷದ್ದಾದರೆ, ದೈಹಿಕ ಚಿಂತನೆ ಎಸ್‍ಡಿಪಿಐಯದು. ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಜೊತೆಗೂಡಿ ಹಿಜಾಬ್ ಗಲಭೆಯನ್ನು ಸೃಷ್ಟಿಸಿವೆ. ಕಾಂಗ್ರೆಸ್‍ಗೆ ಹಿಜಾಬ್ ವಿಚಾರದಲ್ಲಿ ನಷ್ಟ ಆಗುವ ಅರಿವಾಗಿ ಅದು ಆತಂಕಕ್ಕೆ ಒಳಗಾಗಿದೆ ಎಂದು ವಿಶ್ಲೇಷಿಸಿದರು.

ಸಿಎಎ ಗಲಭೆಯಲ್ಲೂ ಕಾಂಗ್ರೆಸ್ ಪಾತ್ರವಿತ್ತು. ಡಿಜೆ ಹಳ್ಳಿ- ಕೆಜೆ ಹಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ ಕೈವಾಡವಿತ್ತು. ರಾಜ್ಯದಲ್ಲಿ ಅವಾಂತರ ಮಾಡಲು ಗಲಭೆಗಳಿಗೆ ಕಾಂಗ್ರೆಸ್ ಬೆಂಗಾವಲಾಗಿ ನಿಂತಿದೆ. ಹಿಜಾಬ್ ವಿಷಯದಲ್ಲಿ ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸಿದೆ. ಸದನದಲ್ಲಿ ಚರ್ಚೆ ಮಾಡಬೇಕಿದ್ದ ವಿರೋಧ ಪಕ್ಷವಾದ ಕಾಂಗ್ರೆಸ್, ಧರಣಿ ಮೂಲಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ, ವಿಧಾನಸಭೆ, ವಿಧಾನ ಪರಿಷತ್ ಮೇಲೆ ನಂಬಿಕೆ ಇಲ್ಲ. ಕೇವಲ ರಾಜಕಾರಣಕ್ಕಾಗಿ ಕಾಂಗ್ರೆಸ್ಸಿಗರು ಧರಣಿ ಕುಳಿತಿದ್ದಾರೆ ಎಂದು ಟೀಕಿಸಿದ ಅವರು, ಕಾಂಗ್ರೆಸ್‍ನ ಈ ನಿಲುವನ್ನು ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಖಂಡಿಸುತ್ತದೆ. ವಿರೋಧ ಪಕ್ಷವಾಗಿ ಅದು ನಾಲಾಯಕ್ ಪಾರ್ಟಿ ಎಂದರು.

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮೇಲೇಳುವುದಿಲ್ಲ ಎಂಬುದು ಆ ಪಕ್ಷದ ನಾಯಕರಿಗೆ ಗೊತ್ತಾಗಿದೆ. ಶಾಲೆಗಳಲ್ಲಿ ಧನಿಕ, ಬಡವ, ಜಾತಿ ವಿಂಗಡನೆ ಆಗಬಾರದೆಂಬ ಕಾರಣಕ್ಕೆ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಲಾಗಿದೆ. ಶಾಲೆಯಲ್ಲಿ ಸಮವಸ್ತ್ರ ಕಡ್ಡಾಯ. ಶಾಲೆಯೊಳಗೆ ಹಿಜಾಬ್‍ಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರಧ್ವಜ, ಸಂವಿಧಾನ, ಜನಗಣಮನ, ವಂದೇ ಮಾತರಂ ಗೀತೆಗೆ ಬಿಜೆಪಿ ಗರಿಷ್ಠ ಗೌರವ ನೀಡುತ್ತಿದೆ. ಶಿವಮೊಗ್ಗದಲ್ಲಿ ಕಾಲೇಜೊಂದರಲ್ಲಿ ರಾಷ್ಟ್ರಧ್ವಜವನ್ನು ಇಳಿಸಿ ಕೇಸರಿ ಧ್ವಜವನ್ನು ಹಾರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಸುಳ್ಳುಮಾಹಿತಿ ನೀಡಿದ್ದರು. ಸುಳ್ಳು, ಮೋಸದ ಮೂಲಕ ಗಲಭೆಗೆ ಪ್ರೇರೇಪಿಸಿದ್ದರು. ಕಾಂಗ್ರೆಸ್ಸಿಗರು ರಾಷ್ಟ್ರಧ್ವಜ, ಜನಗಣಮನಕ್ಕೆ ಗೌರವ ಕೊಡುವುದಿಲ್ಲ. ಅವರದು ಏನಿದ್ದರೂ ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಜೈಕಾರವನ್ನಷ್ಟೇ ಕೂಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ಸಿಗರು ನಮಗೆ ರಾಷ್ಟ್ರಭಕ್ತಿಯ ಪಾಠ ಹೇಳಬೇಕಿಲ್ಲ. ರಾಷ್ಟ್ರಧ್ವಜ ಮತ್ತು ಕೇಸರಿ ಧ್ವಜಗಳೆರಡನ್ನೂ ನಾವು ಗೌರವಿಸುತ್ತೇವೆ. ಕಾಂಗ್ರೆಸ್ ಪಕ್ಷದ ಗಲಭೆ ಸೃಷ್ಟಿಸುವ ಪ್ರಯತ್ನದ ಫಲವಾಗಿ ಶಿವಮೊಗ್ಗದಲ್ಲಿ ಹಿಂದು ಕಾರ್ಯಕರ್ತನ ಹತ್ಯೆಯಾಗಿದೆ. ಈ ಹತ್ಯೆಗೆ ಕಾರಣವಾದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಪದಾಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!