ಕಾಂಗ್ರೆಸ್ ನಿಂದ ಸಶಸ್ತ್ರ ಪಡೆಗಳಲ್ಲಿ ಧರ್ಮ ಆಧಾರಿತ ಜಾತಿಗಣತಿಗೆ ಯತ್ನ: ರಾಜನಾಥ್ ಸಿಂಗ್ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶದಲ್ಲಿ ಕಾಂಗ್ರೆಸ್ ನ ‘ಸಂಪತ್ತು ಪುನರ್ ವಿಂಗಡಣೆ’ ವಿವಾದ ತಾರಕಕ್ಕೇರಿರುವಾಗಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಕ್ಷದ ಮೇಲೆ ಮತ್ತೊಂದು ಬಾಂಬ್ ಎಸೆದಿದ್ದಾರೆ.

ವಿಶಾಖಪಟ್ಟಣಂನಲ್ಲಿ ಚುನಾವಣಾ ಸಮಾವೇಶದಲ್ಲಿ ಅವರು, ಕೇಂದ್ರದ ಹಿಂದಿನ ಕಾಂಗ್ರೆಸ್ ಸರ್ಕಾರಗಳು ‘ಧಾರ್ಮಿಕ ಜನಗಣತಿ’ಗೆ ಶಿಫಾರಸು ಮಾಡುವ ಮೂಲಕ ಸಶಸ್ತ್ರ ಪಡೆಗಳನ್ನು ವಿಭಜಿಸಲು ಪ್ರಯತ್ನಿಸಿದ್ದವು ಎಂದು ಆರೋಪಿಸಿದ್ದಾರೆ.

2006ರಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದ್ದ ಸಾಚಾರ್ ಸಮಿತಿಯು ಸಶಸ್ತ್ರ ಪಡೆಗಳಲ್ಲಿ ಧರ್ಮಾಧಾರಿತ ಜನಗಣತಿಗೆ ಶಿಫಾರಸು ಮಾಡಿತ್ತು. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸುವುದಾಗಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸೂಚಿಸಿದೆ. ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ಪರಿಚಯಿಸಿದರೆ ಮತ್ತು ಸಶಸ್ತ್ರ ಪಡೆಗಳಲ್ಲಿ ಧರ್ಮದ ಆಧಾರದ ಮೇಲೆ ಜಾತಿ ಗಣತಿಯನ್ನು ಕೈಗೊಂಡರೆ ಅದು ದೇಶದ ಏಕತೆ ಮತ್ತು ಸಮಗ್ರತೆಗೆ ಒಳ್ಳೆಯದಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಪಕ್ಷವು ಧರ್ಮದ ಆಧಾರದ ಮೇಲೆ ಮೀಸಲಾತಿ ತರಲು ಪ್ರಯತ್ನಿಸುತ್ತಿದೆ. ಇದು ಕಾಂಗ್ರೆಸ್ ಪಕ್ಷದ ನಿಜಸ್ವರೂಪವನ್ನು ಬಯಲು ಮಾಡುತ್ತಿದೆ ಎಂದು ಕಾಂಗ್ರೆಸ್ ತುಷ್ಟೀಕರಣ ರಾಜಕಾರಣವನ್ನು ರಾಜನಾಥ್ ಸಿಂಗ್ ಖಂಡಿಸಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಒಡಕು ಮೂಡಿಸುತ್ತಿವೆ . ಇದೇ ಪಕ್ಷ ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆದಿದ್ದು, ತುಷ್ಟೀಕರಣದ ಮೂಲ ರಾಜಕಾರಣ ಆ ಪಕ್ಷದ ಡಿಎನ್‌ಎಯಲ್ಲಿದೆ ಎಂದು ರಾಜನಾಥ್ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!