ಅಪರಾಧ ಪ್ರಜ್ಞೆ ಹೋಗಲಾಡಿಸಲು ಕಾಂಗ್ರೆಸ್ ಪಾದಯಾತ್ರೆ: ಸಿಎಂ ಲೇವಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ತಾವು ಅಧಿಕಾರದಲ್ಲಿದ್ದಾಗ ಏನೂ ಕೆಲಸ ಮಾಡಿಲ್ಲ ಎನ್ನುವ ಅಪರಾಧ ಮನೋಭಾವ ಅವರನ್ನು ಕಾಡುತ್ತಿದೆ. ಆ ಅಪರಾಧ ಮನೋಭಾವವನ್ನು ದೂರ ಮಾಡುವ, ಜನರನ್ನು ಮರುಳು ಮಾಡುವ ಸಲುವಾಗಿ ಈ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಕಾಂಗ್ರೆಸ್ ಪಾದಯಾತ್ರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದ ಬೆಂಗಳೂರಿನ ಪ್ರಮುಖರ ಸಭೆ ಕರೆಯಲಾಗಿದೆ. ಅದರಲ್ಲಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಚರ್ಚೆಯಾಗುತ್ತದೆ. ಜೊತೆಗೆ ಮೇಕೆದಾಟು ಅಣೆಕಟ್ಟೆ ಯೋಜನೆ ಹಾಗೂ ಪಾದಯಾತ್ರೆಯ ಬಗ್ಗೆಯೂ ಚರ್ಚೆಯಾಗುತ್ತದೆ ಎಂದರು.

ಈ ಪಾದಯಾತ್ರೆ ಯಾತಕ್ಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಬಂದಿದೆ. ಅವರು ಐದು ವರ್ಷ ಆಡಳಿತ ನಡೆಸಿದ್ದಾರೆ. ಆಗ ಸರಿಯಾಗಿ ಡಿಪಿಆರ್ ಸಲ್ಲಿಸಲಾಗಲಿಲ್ಲ. ಸಮ್ಮಿಶ್ರ ಸರಕಾರ ಬಂದ ನಂತರ ಡಿಪಿಆರ್ ಸಲ್ಲಿಕೆಯಾಗಿದೆ. ಅವರಿಗೆ ಯಾವುದೇ ಬದ್ಧತೆ ಇಲ್ಲ ಎಂದ ಸಿಎಂ, ಸಮ್ಮಿಶ್ರ ಸರಕಾರದಲ್ಲಿ ಡಿ.ಕೆ. ಶಿವಕುಮಾರ್ ಅವರು ನೀರಾವರಿ ಸಚಿವರಾಗಿದ್ದರು. ಆಗಲೂ ಅದನ್ನು ಮುಂದುವರಿಸಲಾಗಲಿಲ್ಲ. ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆಯ ಬಗ್ಗೆ ವಿಧಾನಸಭೆ ಸಹಿತ ಎಲ್ಲಿಯೂ ಚರ್ಚೆ ಮಾಡಲೇ ಇಲ್ಲ. ಹೀಗಿರುವಾಗ ಚುನಾವಣೆ ಹತ್ತಿರ ಬಂದಿದೆ ಎಂದು ಏಕಾಏಕಿ ರಾಜಕೀಯ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನವರು ಯಾವುದೇ ನೀರಾವರಿ ಯೋಜನೆ ಬಗ್ಗೆಯಾಗಲಿ ಯಾವತ್ತೂ ಬದ್ಧತೆಯಿಂದ ಕೆಲಸ ಮಾಡಿಲ್ಲ. ಕೃಷ್ಣೆಯ ಬಗ್ಗೆ ಪಾದಯಾತ್ರೆ ಮಾಡಿದ್ರು, ಏನಾಯ್ತು? ಇದೇ ಥರ ಕೂಡಲ ಸಂಗಮದ ನೀರಿನಲ್ಲಿ ಹೋಗಿ ಆಣೆ ಮಾಡಿದ್ರು, ಪ್ರತೀ ವರ್ಷ ₹ 10ಸಾವಿರ ಕೋಟಿ ಕೊಡ್ತೇವೆ, ₹ 50ಸಾವಿರ ಕೋಟಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೊಡುತ್ತೇವೆ ಎಂದಿದ್ದರು. ಎಲ್ಲಿದೆ ದುಡ್ಡು? ಇಡೀ ಐದು ವರ್ಷದಲ್ಲಿ ₹ 7ಸಾವಿರ ಕೋಟಿ ಕೂಡ ಕೊಟ್ಟಿಲ್ಲ. ಇದು ಜನರನ್ನು ಮರುಳು ಮಾಡುವ ಸಲುವಾಗಿ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದರಿಂದ ಜನ ಪದೇ ಪದೇ ಮರುಳಾಗುವುದಿಲ್ಲ. ಎಲ್ಲರನ್ನು ಎಲ್ಲ ಸಂದರ್ಭದಲ್ಲಿ ಮೋಸ ಮಾಡಲು ಆಗಲ್ಲ ಎನ್ನುವ ಗಾದೆಯೇ ಇದೆ ಎಂದು ಸಿಎಂ ಟೀಕಿಸಿದರು.

ಸರಕಾರದಿಂದ ಬದ್ಧತೆಯ ಕೆಲಸ:
ಮೇಕೆದಾಟು ಯೋಜನೆಯ ವಿಚಾರದಲ್ಲಿ ನಾವು ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ. ನಾನು ಮುಖ್ಯಮಂತ್ರಿ ಆದ ನಂತರ ನಮ್ಮ ಒತ್ತಡದಿಂದ ಡಿಪಿಆರ್ ಅನುಮೋದನೆಗೆ ಸಿಡಬ್ಲ್ಯೂಸಿಯಿಂದ ಕಾವೇರಿ ಮೇಲ್ವಿಚಾರಣಾ ಮಂಡಳಿಗೆ ಹೋಗಿದೆ. ಇದೇ ತಿಂಗಳಲ್ಲಿ ಸಭೆಯೂ ನಡೆಯುತ್ತಿದ್ದು, ಅಲ್ಲಿ ತೀರ್ಮಾನಗಳಾಗುವ ನಿರೀಕ್ಷೆ ಇದೆ. ಸುಪ್ರೀಂ ಕೋರ್ಟ್ ನಲ್ಲಿಯೂ ಇದೇ ತಿಂಗಳಲ್ಲಿ ಪ್ರಕರಣ ವಿಚಾರಣೆಗೆ ಬರುತ್ತಿದೆ. ಕಾನೂನಾತ್ಮಕವಾಗಿ ಹೋರಾಟ ಮುಂದುವರಿದಿದೆ. ಪರಿಸರಾತ್ಮಕ ಅನುಮತಿಗೂ ಪ್ರಯತ್ನ ನಡೆಸಲಾಗುತ್ತದೆ ಎಂದು ವಿವರಿಸಿದರು.

ಜನ ತೀರ್ಮಾನ ಮಾಡುತ್ತಾರೆ:
ಹಿಂದೊಮ್ಮೆ ರೈತರು ಅಲ್ಲಿಗೆ ಸಣ್ಣದೊಂದು ರಸ್ತೆ ಮಾಡಿ, ಭೇಟಿ ಕೊಡುವಾಗ, ಎನ್ ಜಿಟಿ ಆ ಭೇಟಿಗೆ ಸ್ಟೇ ಕೊಟ್ಟಿತ್ತು. ಇವರು ಇಷ್ಟೊಂದು ದೊಡ್ಡ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದರಿಂದ ಆಗುವ ಪರಿಣಾಮಗಳೇನು ಎಂಬುದು ಗೊತ್ತಿದ್ದರೂ ರಾಜಕೀಯ ಮುಖ್ಯವಾಗುತ್ತಿದೆ. ಎನ್ ಜಿಟಿಯಿಂದ ಸ್ಟೇ ತೆರವುಗೊಳಿಸಿ, ಆ ಆದೇಶವನ್ನು ರದ್ದುಗೊಳಿಸಿದ್ದೇವೆ. ಆದರೆ ತಮಿಳುನಾಡು ಅದನ್ನು ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಇವೆಲ್ಲ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಒಂದು ಜವಾಬ್ದಾರಿಯುತವಾಗಿರುವ, ಹಿಂದೆ ಸರಕಾರ ನಡೆಸಿರುವ ಪಕ್ಷ ಈ ವ್ಯವಸ್ಥೆ, ಕಾನೂನು ಹೇಗಿದೆ? ಅಂತರ್ ರಾಜ್ಯ ನೀರು ಹಂಚಿಕೆ ವಿವಾದವೇನು? ಸುಪ್ರೀಂ ಕೋರ್ಟ್ ಆದೇಶಗಳೇನು? ಕಾವೇರಿ ನ್ಯಾಯಾಧಿಕರಣದ ತೀರ್ಪೇನು? ಇದು ಎಲ್ಲವನ್ನು ಗಮನಿಸಿದ್ದರೆ ಈ ರೀತಿ ಪಾದಯಾತ್ರೆ ಮಾಡುತ್ತಿರಲಿಲ್ಲ. ಇದು ಯಾವುದೂ ಅವರಿಗೆ ಬೇಕಾಗಿಲ್ಲ, ಕೇವಲ ರಾಜಕಾರಣ ಮಾತ್ರ ಬೇಕು, ಜನ ಇದನ್ನು ತೀರ್ಮಾನ ಮಾಡುತ್ತಾರೆ ಎಂದು ಸಿಎಂ ಹೇಳಿದರು.

ಕಾನೂನು ಪ್ರಕಾರ ಕ್ರಮ:
ಒಂದು ಡಿಪಿಆರ್ ಮಾಡಲು ಅವರು ನಾಲ್ಕು ವರ್ಷ ತೆಗೆದುಕೊಂಡಿದ್ದಾರೆ. ಕೇವಲ ಪ್ರಾಥಮಿಕ ಕಾರ್ಯಸಾಧ್ಯತಾ ವರದಿಯನ್ನಷ್ಟೇ ಸಲ್ಲಿಕೆ ಮಾಡಿದ್ದರು. ಇದು ಅವರ ಸಾಧನೆ ಎಂದು ಲೇವಡಿ ಮಾಡಿದ ಸಿಎಂ ಬೊಮ್ಮಾಯಿ, ಕೋವಿಡ್ ನಿಯಮ ಉಲ್ಲಂಘಿಸುವುದಕ್ಕೆ ಈಗಾಗಲೇ ಅವರಿಗೆ ನೋಟೀಸು ಕೊಡಲಾಗಿದೆ. ನಮ್ಮ ಅಧಿಕಾರಿಗಳು ಅಲ್ಲಿಗೆ ಹೋಗಿ ನೀವು ಮಾಡುವುದು ಸರಿಯಲಗಲ ಎಂದು ಸೂಚನೆ ನೀಡಿದ್ದಾರೆ. ಅವರು ಉಡಾಫೆಯಿಂದ ಮಾಡುತ್ತಿದ್ದಾರೆ. ಅದಕ್ಕೆ ನಾವು ಕಾನೂನು ಪ್ರಕಾರ ಏನಾಗಬೇಕೋ ಆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!