ಹೊಸದಿಗಂತ ವರದಿ, ಮಂಡ್ಯ:
ಮಂಡ್ಯ ವಿಧಾನ ಸಭಾ ಕ್ಷೇತ್ರಕ್ಕೆ ಘೋಷಣೆಯಾಗಿರುವ ಅಭ್ಯರ್ಥಿಯನ್ನು ಬದಲಿಸಿ ಹಿರಿತನ, ಅನುಭವದ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಘೋಷಿಸಬೇಕು ಎಂದು ಮಾಜಿ ಸಚಿವ ಎಂ.ಎಸ್. ಆತ್ಮಾನಂದ ಒತ್ತಾಯಿಸಿದರು.
ನಗರದ ಹೊರ ವಲಯದಲ್ಲಿರುವ ಅಮರಾವತಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಟ್ಟು 16 ಮಂದಿ ಅಭ್ಯರ್ಥಿಗಳು ಮಂಡ್ಯ ವಿಧಾನ ಸಭಾ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದು, ಇದರಲ್ಲಿ ನಾವು 10 ಮಂದಿ ಹಿಂದಿನಿಂದಲೂ ಒಟ್ಟಿಗೇ ಇದ್ದೇವೆ. ನಮ್ಮಲ್ಲೇ ಯಾರಿಗಾದರೂ ಟಿಕೆಟ್ ನೀಡಬೇಕು ಎಂದು ಈ ಹಿಂದೆಯೇ ಕೆಪಿಸಿಸಿ ಅಧ್ಯಕ್ಷರು, ವಿಪಕ್ಷ ನಾಯಕರಿಗೂ ಮನವರಿಕೆ ಮಾಡಿಕೊಟ್ಟಿದ್ದೆವು. ಆದರೆ ಪಕ್ಷ ಅಭ್ಯರ್ಥಿಯನ್ನು ಘೋಷಿಸಿರುವುದು ಸಮಂಜಲವಾಗಿಲ್ಲ ಎಂದು ಹೇಳಿದರು.
ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು, ನಮ್ಮ 10 ಮಂದಿಯ ತಂಡದೊಳಗೇ ಒಬ್ಬ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಟಿಕೆಟ್ ನೀಡಬೇಕು. ಹಾಲಿ ಅಭ್ಯರ್ಥಿಯನ್ನಾಗಿ ಘೋಷಿಸಿರುವುದನ್ನು ವಾಪಸ್ಸು ಪಡೆಯಬೇಕು ಎಂದು ಮನವಿ ಮಾಡಿದ್ದು, ಅಧ್ಯಕ್ಷರು ಸಹ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಶೀಘ್ರ ಬದಲಾವಣೆಯಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಷುಗರ್ ಮಾಜಿ ಅಧ್ಯಕ್ಷ ರಾಮಲಿಂಗಯ್ಯ ಮಾತನಾಡಿ, ಕಳೆದ ಬಾರಿಯೂ ಇದೇ ಅಭ್ಯರ್ಥಿಗೇ ಟಿಕೆಟ್ ನೀಡಲಾಗಿತ್ತು. ಆದರೆ ಕೊನೇ ಗಳಿಗೆಯಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ಕ್ಷೇತ್ರದ ಜನತೆ ಮತ್ತು ಕಾಂಗ್ರೆಸ್ ಮುಖಂಡರಿಗೆ ತಿಳಿದಿದೆ. ಅದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅಭ್ಯರ್ಥಿಯ ಲೋಪದಿಂದಾಗಿ ನಾವು ಮಂಡ್ಯ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಗಿಯಿತು. ಈಗಲೂ ಅಭ್ಯರ್ಥಿಯನ್ನು ಬದಲಿಸದಿದ್ದರೆ ಮತ್ತೆ ಪುನರಾವರ್ತನೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.
ನಾವು 10 ಮಂದಿಯೂ ಪಕ್ಷಕ್ಕಾಗಿ 30-40 ವರ್ಷಗಳ ಕಾಲ ದುಡಿದಿದ್ದೇವೆ. ವಿವಿಧ ಹುದ್ದೆಗಳನ್ನೂ ಅನುಭವಿಸಿದ್ದೇವೆ. ಅನುಭವಿಯಾಗಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದೇವೆ. ನಮ್ಮ ಅಹವಾಲನ್ನು ಆಲಿಸಿದ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಶೀಘ್ರ ಬದಲಿ ಅಭ್ಯರ್ಥಿ ಘೋಷಣೆಯಾಗುವ ಸಾಧ್ಯತೆಗಳಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.