ಹೊಸದಿಗಂತ ವರದಿ,ಚಿತ್ರದುರ್ಗ:
ರಾಜ್ಯ ಸಚಿವ ಸಂಪುಟ ಪುನರ್ ರಚನೆ ಕುರಿತು ಯಾವುದೇ ಚರ್ಚೆ ಇಲ್ಲ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ, ಮೇಕೆದಾಟು ಯೋಜನೆ ಕಾಂಗ್ರೆಸ್ಸಿಗೆ ಈಗ ನೆನಪಾಗಿದೆ. ಇಷ್ಟು ದಿನ ಮೇಕೆದಾಟು ಯೋಜನೆ ಮರೆತು ಹೋಗಿತ್ತಾ? ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಏನು ಮಾಡಿತ್ತು? ಈಗ ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆ ಅಗತ್ಯವಿದೆಯೇ? ಕಾಂಗ್ರೆಸ್ ಪಕ್ಷ ತನ್ನ ಗೊಂದಲವನ್ನು ಮರೆಮಾಚಲು ಪಾದಯಾತ್ರೆ ಕಾರ್ಯಕ್ರಮ ನಡೆಸುತ್ತಿದೆ ಎಂದು ಲೇವಡಿ ಮಾಡಿದರು.
ದೇವಸ್ಥಾನಗಳ ಅಭಿವೃದ್ಧಿಗೆ ಉಪವಿಭಾಗಧಿಕಾರಿಗಳು ಸಹಕರಿಸುತ್ತಿಲ್ಲ. ದೇವಸ್ಥಾನ ಸಮಿತಿ ರಚಿಸಿ ಬಿಟ್ಟಿದ್ದಾರೆ ಅಷ್ಟೇ. ಸ್ಥಳೀಯವಾಗಿ ಅಭಿವೃದ್ಧಿಗೊಳಿಸಲು ನಿಯಮ ರಚನೆ. ದೇಗುಲಗಳನ್ನು ಪಾಕಿಸ್ತಾನ, ಬಾಂಗ್ಲಾದವರಿಗೆ ಬರೆದು ಕೊಡುತ್ತಿಲ್ಲ. ಅಧಿಕಾರ ನಡೆಸಲು ಎಳಸು, ಸೀನಿಯರ್ ಎಂಬುದು ಮುಖ್ಯವಲ್ಲ, ಬದ್ಧತೆ ಬೇಕು ಎಂದ ಅವರುಮ ಗೃಹ ಮಂತ್ರಿಗೆ ಎಳಸು ಎಂದಿರುವ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದರು.