Saturday, June 10, 2023

Latest Posts

ಪ್ರತಿಭಾ ಪ್ರದರ್ಶನಕ್ಕೆ ನಾಟಕ ರಂಗ ಉತ್ತಮ ವೇದಿಕೆ : ವಸತಿ ಸಚಿವ ವಿ.ಸೋಮಣ್ಣ

ಹೊಸದಿಗಂತ ವರದಿ,ಚಿತ್ರದುರ್ಗ:

ಅಭಿನಯ, ಅಭಿವ್ಯಕ್ತಿ, ಹಾಡುಗಾರಿಕೆ ಪ್ರದರ್ಶಿಸಲು ಸೂಕ್ತವಾದ ವೇದಿಕೆ ನಾಟಕ ರಂಗ. ಇಲ್ಲಿ ಸಹಜತೆ ಅರ್ಥಾತ್ ನೈಜತೆ ಇರುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಇಲ್ಲಿನ ಮುರುಘಾಮಠದಲ್ಲಿ ಹಮ್ಮಿಕೊಂಡಿರುವ ಜಮುರಾ ರಾಷ್ಟ್ರೀಯ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ೯೦೦ ವರ್ಷಗಳ ಹಿಂದೆ ಬಸವಣ್ಣನವರ ಇತಿಹಾಸವನ್ನು ಇನ್ನೂ ನೂರಾರು ವರ್ಷ ಜನರಿಗೆ ತಲುಪಿಸುವ ಕೆಲಸವನ್ನು ಮುರುಘಾ ಶರಣರು ಮಾಡುತ್ತಿದ್ದಾರೆ. ಬಸವ ಕಲ್ಯಾಣದ ಜನರು ಇಂದಿಗೂ ಬಸವಣ್ಣನವರು ಜೀವಂತವಾಗಿದ್ದಾರೆಂದು ಭಾವಿಸಿದ್ದಾರೆ ಎಂದರು.
ಶ್ರೀಮಠಕ್ಕೆ ದೊಡ್ಡ ಇತಿಹಾಸವಿದೆ. ಮೈಸೂರು ಮಹಾರಾಜರು ಶ್ರೀ ಮಠದಿಂದ ಸಾಲ ತೆಗೆದುಕೊಂಡಿದ್ದಾರೆ. ಶ್ರೀಮಠದಲ್ಲಿ ನಿತ್ಯ ಸಾವಿರಾರು ಜನರು ಪ್ರಸಾದ ಮಾಡುತ್ತಿದ್ದಾರೆ. ಶ್ರೀ ಮುರುಘಾ ಮಠ ಇದೊಂದು ಜ್ಞಾನ ದೇಗುಲ. ಮುರುಘಾಮಠ ಬೇರೆ ಮಠಗಳಿಗಿಂತ ಭಿನ್ನ. ನನಗೆ ಮಠಗಳೊಂದಿಗೆ ಅವಿನಾಭಾವ ಸಂಬಂಧವಿದೆ. ಶ್ರೀಮಠ ದೇಶಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ನಮ್ಮನ್ನು ನಾವು ಮಾಡುವ ಕೆಲಸದಿಂದ ಗುರುತಿಸಿಕೊಂಡಿzವೆ ಎಂದು ಹೇಳಿದರು.
ನಮ್ಮ ಬಂಡವಾಳ ಎಂದರೆ ಒಳ್ಳೆಯ ನಡತೆ ಹಾಗೂ ಜನಮುಖಿ ಕಾರ್ಯಗಳು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮಾಸ್ಕ್ ಧರಿಸಿರಿ. ಮುರುಘಾ ಶರಣರ ಕಾರ್ಯವೈಖರಿಗಳು ನಮಗೆ ಇಷ್ಟ. ತಮ್ಮ ತೀರ್ಮಾನಗಳು ಕಹಿಯಾಗಿದ್ದರೂ ಮುಂದೆ ಅವು ಸಿಹಿಯನ್ನು ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಮಧ್ಯ ಕರ್ನಾಟಕದಲ್ಲಿಯೂ ಸಹ ಅಧಿವೇಶನ ಮಾಡಿ ಈ ಬಾಗದ ಸಮಸ್ಯೆಗಳನ್ನು ಬಗೆಹರಿಸಿ ಎಂದು ಡಾ ಶಿವಮೂರ್ತಿ ಮುರುಘಾ ಶರಣರ ಸೂಚನೆಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ನಾಟಕ ಆಕಾಡೆಮಿ ಅಧ್ಯಕ್ಷ ಆರ್. ಭೀಮಸೇನ ಕಲಾವಿದನಿಗೆ ಬಣ್ಣ ಹಚ್ಚುವ ಮೂಲಕ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿ, ನಾನು ಜಮುರಾ ಕಲಾಲೋಕದ ಕಲಾವಿದ. ಶ್ರೀಗಳ ಆಶೀರ್ವಾದಿಂದ ಇಂದು ನಾಟಕ ಅಕಾಡೆಮಿ ಅಧ್ಯಕ್ಷನಾಗಿzನೆ. ಮನುಷ್ಯ ಹೇಗೆ ಬದುಕಬೇಕೆಂದು ನಾಟಕ ಸಂಸ್ಕೃತಿ ತಿಳಿಸುತ್ತದೆ ಎಂದರು.
ಚಲನಚಿತ್ರ ನಟಿ ಶ್ರೀಮತಿ ತಾರಾ ಅನುರಾಧ ೨೦೨೧ನೇ ಸಾಲಿನ ಶಿಮುಶ ರಾಷ್ಟ್ರೀಯ ನಾಟಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಶ್ರೀಮಠವು ಅನೇಕ ಜನರಿಗೆ ರಂಗ ತರಬೇತಿ ನೀಡುತ್ತಿದೆ. ಇಲ್ಲಿ ಕಲಾವಿದರನ್ನು ತಯಾರಿಸುವ ಕ್ಷೇತ್ರವಾಗಿದೆ. ರಂಗಭೂಮಿ ಎಲ್ಲ ರೀತಿಯ ಕಲಾವಿದರನ್ನು ತಯಾರಿಸುತ್ತದೆ. ಕಲೆಗಳ ಬೀಡು ಚಿತ್ರದುರ್ಗ. ಇದೇ ಪ್ರಥಮ ಬಾರಿಗೆ ಕಲಾವಿದರಿಗೆ ಬಣ್ಣ ಹಚ್ಚುವ ಮೂಲಕ ನಾಟಕ ಚಾಲನೆ ನೀಡಿದ್ದು ವಿಶೇಷ ಎಂದುಕೊಂಡಿzನೆ. ರಾಜ್ಯದ ಅನೇಕ ನಾಟಕಗಳನ್ನು ಇಲ್ಲಿಂದಲೇ ಆರಂಭಿಸಬೇಕು ಎಂದು ನಾಟಕ ಅಧ್ಯಕ್ಷರಿಗೆ ಹೇಳಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಬಸವಣ್ಣನವರ ತತ್ವಗಳನ್ನು ಇಂದು ನಾವು ಪಾಲಿಸಬೇಕು. ಶ್ರೀಮಠ ಬಸವತತ್ತ್ವದ ಹಿನ್ನೆಲೆಯಲ್ಲಿ ನಡೆಯುತ್ತಿದೆ. ಎಲ್ಲ ಜಾತಿ ಜನಾಂಗಗಳನ್ನು ಒಪ್ಪಿಕೊಳ್ಳುವ ಮಠ ಇದು. ಬಸವಣ್ಣನವರ ಕಾಲದ ಅನುಭವ ಮಂಟಪದ ಕಾರ್ಯಕಲಾಪಗಳು ಇಂದು ಮುರುಘಾಮಠದ ಅನುಭವ ಮಂಟಪದಲ್ಲಿ ನಡೆಯುತ್ತಿವೆ ಎಂದರು.
ನಂತರ ಡಾ. ಶಿವಮೂರ್ತಿ ಮುರುಘಾ ಶರಣರ ರಚನೆ ಮತ್ತು ಎಲ್.ಕೃಷ್ಣಪ್ಪ ನಿರ್ದೇಶಿಸಿರುವ ಅವಿರಳಜ್ಞಾನಿ ಚೆನ್ನಬಸವಣ್ಣ ನಾಟಕವನ್ನು ಜಮುರಾ ಸುತ್ತಾಟ ತಂಡದವರು ಅಭಿನಯಿಸಿದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಸುಮಾ ರಾಜಶೇಖರ್ ಸ್ವಾಗತಿಸಿದರು. ಆಶಾರಾಣಿ ನಿರೂಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!