ದೇಶ ವಿಭಜನೆಗೆ ಕಾಂಗ್ರೆಸ್ ನೇರ ಕಾರಣ : ಆರ್. ಅಶೋಕ್ ಟೀಕೆ

ಹೊಸದಿಗಂತ ವರದಿ ಬೆಂಗಳೂರು:

ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನರು ಹೋರಾಡಿದ್ದರು. ಭಾರತ ಭಾರತವಾಗಿ ಉಳಿಯಬೇಕೆಂಬ ಪಣ ತೊಟ್ಟಿದ್ದರು. ಆದರೆ, ಆ. 14ರಂದು ದೇಶ ವಿಭಜನೆ ಆಗಿದ್ದು, ಅದೊಂದು ಕರಾಳ ದಿನ. ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ಪಕ್ಷ ನೇರ ಕಾರಣ ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ “ಭಾರತ ವಿಭಜನೆಯ ದುರಂತ ಕಥೆಗೆ ಸಂಬಂಧಿಸಿದ ಪ್ರದರ್ಶಿನಿ”ಯ ಉದ್ಘಾಟನೆ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮಾತನಾಡಿದರು. ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ 76ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, 14ರ ದೇಶ ಇಬ್ಭಾಗದ ಘಟನೆ ಮೂಲಕ ಸ್ವಾತಂತ್ರ್ಯ ಯೋಧರಿಗೆ ಅಪಮಾನ ಆಗಿದೆ ಎಂದರು.

ಎದೆಗಾರಿಕೆ ಇರಲಿಲ್ಲ:

ನೆಹರೂರವರ ನೇತೃತ್ವದ ಕಾಂಗ್ರೆಸ್ ಹುನ್ನಾರದ ಪರಿಣಾಮವಾಗಿ ಜಿನ್ನಾ ಅವರ ಮೂಲಕ ಈ ಆಟ ಮಾಡಲಾಯಿತು. ಕಾಂಗ್ರೆಸ್ ಸಂಸ್ಕೃತಿಯೇ ಇದು. ಕಾಶ್ಮೀರವು ನಮ್ಮದೇ ಎನ್ನುವ ಎದೆಗಾರಿಕೆ ಅವರಿಗೆ ಇರಲಿಲ್ಲ. 370ನೇ ವಿಧಿಯನ್ನು ರದ್ದು ಮಾಡಿದ ಬಳಿಕ ಲೂಟಿ, ದಂಗೆ ಕಡಿಮೆ ಆಗಿದೆ. ಕಾಂಗ್ರೆಸ್ ದೇಶವನ್ನು ತುಂಡರಿಸಿದೆ ಎಂದು ಎಐಸಿಸಿ ಅಧ್ಯಕ್ಷ ಖರ್ಗೆಯವರಿಗೆ ತಿಳಿಸಬಯಸುವುದಾಗಿ ಹೇಳಿದರು.

ಮೋದಿಜಿ ಅವರು ದೇಶವನ್ನು ಒಟ್ಟಾಗಿ ಒಯ್ಯುತ್ತಿದ್ದಾರೆ. ಕಾಶ್ಮೀರ, ಮಣಿಪುರ ಮತ್ತಿತರ ಕಡೆಗಣಿತ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಅವರು ಶ್ರಮಿಸುತ್ತಿದ್ದಾರೆ ಎಂದರು.

ದೇಶ ವಿಭಜಿಸದಿರಿ:

ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮಾತನಾಡಿ, ದೇಶ ವಿಭಜನೆ ಸಂದರ್ಭದಲ್ಲಿ ಅತ್ಯಂತ  ಕಠೋರವಾಗಿ ವಿರೋಧಿಸಿದವರು ಖಾನ್ ಅಬ್ದುಲ್ ಗಫಾರ್ ಖಾನ್. ಸ್ವಾರ್ಥಕ್ಕಾಗಿ ದೇಶ ವಿಭಜನೆ ಮಾಡದಿರಿ. ದೇಶ ವಿಭಜನೆ ಮಾಡಿದರೆ, ನಮ್ಮನ್ನು ನೀವು ಲಾಹೋರ್‍ನ ಪಠಾಣರ ಕೈಗೆ ಕೊಡುತ್ತೀರಿ. ಅದಕ್ಕಾಗಿ ದೇಶ ವಿಭಜಿಸದಿರಿ ಎಂದು ‘ಗಡಿನಾಡ ಗಾಂದಿ’ ಖಾನ್ ಅಬ್ದುಲ್ ಗಫಾರ್ ಖಾನ್ ಹೇಳಿದ್ದರು. ಇವತ್ತೂ ಆ ಮಾತು ಪ್ರಸ್ತುತವಾಗಿದೆ. ಪಾಕಿಸ್ತಾನ ಆರ್ಥಿಕವಾಗಿ ದಿವಾಳಿ ಆಗಿದೆ. ದೇಶ ವಿಭಜನೆ ಬಳಿಕ ಅಲ್ಲಿನ ಜನರ ಜೀವನ ನರಕ ಆಗಿದೆ ಎಂದರು.

ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಾಜಿ ಶಾಸಕ ಪ್ರೀತಂ ಗೌಡ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಿ ಮಂಜುನಾಥ್ ಅವರು ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!