ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕನ್ಕೇರ್ ಎಂಬಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಾಗೂ ಅಭಿವೃದ್ದಿ ಎರಡೂ ಒಟ್ಟಿಗೆ ಇರಲು ಸಾಧ್ಯವೇ ಇಲ್ಲ ಎಂದುಪ್ರತಿಪಾದಿಸಿದ್ದಾರೆ. ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಛತ್ತೀಸ್‌ಗಢ ರಾಜ್ಯದ ಹಿತಾಸಕ್ತಿ ಕಾಪಾಡೋದು, ರಾಜ್ಯವನ್ನು ಬಲಪಡಿಸೋದು ಹಾಗೂ ರಾಜ್ಯದ ಬುಡಕಟ್ಟು ಹಾಗೂ ಹಿಂದುಳಿದ ಸಮುದಾಯದ ಹಕ್ಕುಗಳನ್ನು ರಕ್ಷಿಸೋದು ಬಿಜೆಪಿಯ ಪ್ರಾಥಮಿಕ ಉದ್ದೇಶ ಎಂದು ಹೇಳಿದ್ದಾರೆ.
ಇಲ್ಲಿನ ಕಾಂಗ್ರೆಸ್ ಪಕ್ಷದ ಸರ್ಕಾರವು ಭ್ರಷ್ಟಾಚಾರದಲ್ಲಿ ತೊಡಗಿದೆ . ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕರು ಹಾಗೂ ಸಚಿವರು ತಮ್ಮ ಸ್ವಂತ ಲಾಭಕ್ಕೆ ಕಾರ್ಯ ನಿರ್ವಹಿಸುತ್ತಿದ್ಧಾರೆ ಎಂದು ಹರಿಹಾಯ್ದರು.
ಕಳೆದ 5 ವರ್ಷಗಳಲ್ಲಿ ಛತ್ತೀಸ್‌ಗಢ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸೋಲುಗಳನ್ನು ನೀವು ಕಂಡಿದ್ದೀರಿ. ಈ ಐದೂ ವರ್ಷಗಳಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಅವರ ಸಂಬಂಧಿಕರು ಮಾತ್ರ ಅಭಿವೃದ್ಧಿ ಕಂಡಿದ್ದಾರೆ. ಅವರ ಆಸ್ತಿಗಳು, ಬಂಗಲೆಗಳು ಹೆಚ್ಚಾಗಿವೆ. ಕಾಂಗ್ರೆಸ್ ನಾಯಕರು ಬಡವರಿಗೆ ಏನು ಮಾಡಿದರು? ದಲಿತರು, ಹಿಂದುಳಿದ ವರ್ಗದವರು ಹಾಗೂ ಬುಡಕಟ್ಟು ಜನರಿಗೆ ಏನು ಮಾಡಿದರು? ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ರಸ್ತೆಗಳು ಹಾಳಾಗಿವೆ, ಆಸ್ಪತ್ರೆಗಳ ನಿರ್ವಹಣೆ ಸರಿಯಿಲ್ಲ, ಶಾಲೆಗಳಲ್ಲಿ ಮೂಲ ಸೌಕರ್ಯ ಕೊರತೆ ಎದುರಾಗಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರು. ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ ಎಂದು ಹರಿಹಾಯ್ದಿದ್ದಾರೆ.
ಛತ್ತೀಸ್‌ಗಢ ರಾಜ್ಯದ ಅಸ್ಮಿತೆಯನ್ನು ಬಲಪಡಿಸೋದು ಬಿಜೆಪಿಯ ಪ್ರಮುಖ ಉದ್ದೇಶ. ರಾಜ್ಯದ ಬುಡಕಟ್ಟು ಜನರು, ಹಿಂದುಳಿದ ವರ್ಗದ ಜನತೆಯ ಹಕ್ಕುಗಳನ್ನು ಕಾಪಾಡೋದು ಬಿಜೆಪಿಯ ಉದ್ದೇಶ. ಬಿಜೆಪಿಯು ಛತ್ತೀಸ್‌ಗಢ ರಾಜ್ಯವನ್ನು ದೇಶದ ಪ್ರಮುಖ ರಾಜ್ಯಗಳ ಸಾಲಿಗೆ ತಂದು ನಿಲ್ಲಿಸಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷ ಹಾಗೂ ಅಭಿವೃದ್ಧಿ ಎರಡೂ ಒಟ್ಟಿಗೆ ಇರಲು ಸಾಧ್ಯವೇ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.