ಮಾ.31- ವಾಹನ, ಸಿಲಿಂಡರಿಗೆ ಹೂಹಾರ ಹಾಕಿ ಜಾಗಟೆ ಬಾರಿಸ್ತಾರಂತೆ ಕರ್ನಾಟಕ ಕಾಂಗ್ರೆಸ್ಸಿಗರು

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ದಿನನಿತ್ಯ ಜನಸಾಮಾನ್ಯರ ಜೇಬು ಪಿಕ್ ಪಾಕೆಟ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾ. 31ರಂದು ಕಾಂಗ್ರೆಸ್‌ನಿಂದ ವಿನೂತನ ಮಾದರಿಯ ಪ್ರತಿಭಟನೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಅಂದು ಬೆಳಗ್ಗೆ ಬೆಳಗ್ಗೆ 8ರಿಂದ 11 ಗಂಟೆಯೊಳಗೆ ರಾಜ್ಯದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ತಮ್ಮ ಮನೆಯ ಮುಂದೆ ತಮ್ಮ ವಾಹನ, ಗ್ಯಾಸ್ ಸಿಲಿಂಡರ್ ಇಟ್ಟು ಹೂವಿನ ಹಾರ ಹಾಕಿ ಜಾಗಟೆ ಬಾರಿಸಬೇಕು. ನಂತರ ಅದರ ವಿಡಿಯೋ, ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ ಹಾಕಬೇಕು ಎಂದು ಡಿ.ಕೆ.ಶಿ. ಮನವಿ ಮಾಡಿದರು.

ಇದು ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕ್ರಮವಾಗಿದ್ದು, ಜಿಲ್ಲಾ ಮಟ್ಟದಲ್ಲಿ ಈ ವಿಚಾರವಾಗಿ ಏ. 7ರಂದು ರ‍್ಯಾಲಿ ಹಮ್ಮಿಕೊಳ್ಳಲು ಸೂಚನೆ ನೀಡುತ್ತೇವೆ. ಯುಗಾದಿ, ಬಾಬು ಜಗಜೀವನ್ ರಾಮ್ ಅವರ ಜನ್ಮದಿನ ಹಿನ್ನೆಲೆಯಲ್ಲಿ ಏ. 7 ರಂದು ಈ ಪ್ರತಿಭಟನೆ ಮಾಡಲು ಡಿಸಿಸಿಗೆ ಸೂಚಿಸಿದ್ದು, ರಾಜ್ಯಮಟ್ಟದ ಪ್ರತಿಭಟನೆ ದಿನಾಂಕವನ್ನು ಚರ್ಚಿಸಿ ಪ್ರಕಟಿಸುತ್ತೇವೆ ಎಂದರು.

ಕಾಂಗ್ರೆಸ್ ಮೃದು ಹಿಂದುತ್ವ ಧೋರಣೆ ಅನುಸರಿಸುತ್ತಿದೆಯೇ ಎಂಬ ಪ್ರಶ್ನೆಗೆ, ಇಲ್ಲಿರುವ ನೀವು ನಾವೆಲ್ಲ ಯಾರು? ಹಿಂದು ಹಾಗೂ ಹಿಂದುತ್ವ ನಡುವೆ ಇರುವ ವ್ಯತ್ಯಾಸವನ್ನು ರಾಹುಲ್ ಗಾಂಧಿ ಅವರು ಜೈಪುರ ಭಾಷಣದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ದೇಶವನ್ನು ಧರ್ಮದ ಆಧಾರದ ಮೇಲೆ ಒಡೆದು, ಬಡವರ ಊಟ, ಹೊಟ್ಟೆಪಾಡಿಗೂ ಕಲ್ಲು ಹಾಕಲು ಈ ಸರಕಾರ ಪ್ರಚೋದನೆ ನೀಡುತ್ತಿದೆ. ಇದು ದೇಶಕ್ಕೆ ಮಾರಕ ಎಂದು ಡಿ.ಕೆ. ಶಿವಕುಮಾರ್ ಉತ್ತರಿಸಿದರು.

ಈಶ್ವರಪ್ಪ ಅವರ ವಿರುದ್ಧ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಈಗಾಗಲೇ ನಮ್ಮ ಶಾಸಕಾಂಗ ಪಕ್ಷದ ನಾಯಕರು ಈ ವಿಚಾರವಾಗಿ ಚರ್ಚೆ ಮಾಡಿದ್ದು, ಮುಖ್ಯಮಂತ್ರಿಗಳ ಉತ್ತರಕ್ಕೆ ನಾವು ಕಾಯುತ್ತಿದ್ದೇವೆ. 40% ಜೊತೆಗೆ ಬೇರೆ ಭ್ರಷ್ಟಾಚಾರ ವಿಚಾರವಾಗಿ ಏನು ಹೇಳುತ್ತಾರೆಂದು ನೋಡಿ ನಂತರ ಕಾಂಗ್ರೆಸ್ ತನ್ನ ಕಾರ್ಯಯೋಜನೆ ತಿಳಿಸಲಿದೆ ಎಂದರು.

ಈ ರೀತಿ ಪತ್ರ ಬರೆಯುವುದು ಟ್ರೆಂಡ್ ಆಗಿದ್ದು, ನಾಳೆ ನಿಮ್ಮ ಸರಕಾರ ಬಂದಾಗ ಇದೇ ರೀತಿ ಪತ್ರ ಬರೆದರೆ ಆಗ ನೀವು ರಾಜೀನಾಮೆ ನೀಡುತ್ತೀರಾ ಎಂದು ಕೇಳಿದ್ದಕ್ಕೆ, ನನ್ನ ಮೇಲೆ ಯಾರು ಪತ್ರ ಬರೆದಿದ್ದರು? ನನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿದಾಗ ಯಾರಾದರೂ ಪತ್ರ ಬರೆದಿದ್ದರಾ? ಯಾವುದಾದರೂ ತನಿಖೆ ಆಗಿತ್ತಾ? ಲಂಚ, ರೇಪ್ ಕೇಸ್‌ಗಳು ದಾಖಲಾಗಿದ್ದವಾ? ಏನು ಇರಲಿಲ್ಲ. ಆದರೂ ನನ್ನ ಮೇಲೆ ದಾಳಿ ಮಾಡಿ ಬಂಧಿಸಿದ್ದು ಯಾಕೆ? ಎಂದು ಡಿಕೆಶಿ ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!