ಹೊಸದಿಗಂತ ವರದಿ ರಾಮನಗರ:
ಎಸ್ಐಆರ್ ಪ್ರಕ್ರಿಯೆ ಹೊಸದಲ್ಲ. ಈ ಹಿಂದೆಯೂ ಈ ರೀತಿಯ ಮತ ಪರಿಷ್ಕರಣೆ ದೇಶದಲ್ಲಿ ಮಾಡಲಾಗಿತ್ತು. ಚುನಾವಣಾ ಆಯೋಗವೂ ಒಮ್ಮತದಿಂದಲೇ ಈ ಪ್ರಕ್ರಿಯೆ ಮಾಡಿದೆ. ಕಾಂಗ್ರೆಸ್ ಇಡೀ ದೇಶದಲ್ಲಿ ಸುಳ್ಳನ್ನೇ ಸತ್ಯವೆಂದು ನಂಬಿಸಲು ಹೊರಟಿದೆ. ಹಾಗಾಗಿ ದಿನ ನಿತ್ಯ ಸುಳ್ಳು ಹೇಳಲು ಪ್ರಾರಂಭಿಸಿದೆ ಎಂದು ಸಂಸದ ಡಾ.ಸಿಎನ್.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವುದು, ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವುದು ಹಾಗೂ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬಲಪಡಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಏಕ ಪಕ್ಷೀಯ ತೀರ್ಮಾನವಲ್ಲ:
ಎಸ್ಐಆರ್ ವಿಚಾರದಲ್ಲಿ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿಲ್ಲ ಎಂಬುದಾಗಿ ಚುನಾವಣಾ ಆಯೋಗವೇ ಸುಪ್ರೀಂ ಕೋರ್ಟ್ಗೆ ಅಫಿಡೇವಿಟ್ ಸಲ್ಲಿಸಿದೆ. ಕಾಂಗ್ರೆಸ್ ಯಾವೆಲ್ಲಾ ಕಡೆ ಗೆಲುವು ಸಾಧಿಸಿದರೆ, ಅಲ್ಲಿ ಎಲ್ಲವೂ ಸರಿ ಇದ್ದಂತೆ. ಅದೇ ರೀತಿ ಯಾವೆಲ್ಲಾ ಕ್ಷೇತ್ರದಲ್ಲಿ ಸೋತರೆ ಎಲ್ಲವೂ ಸರಿಯಿಲ್ಲ ಎಂಬ ಮನಸ್ಥಿತಿಯಿಂದ ಕಾಂಗ್ರೆಸ್ ಪಕ್ಷ ಹೊರಬರಬೇಕು ಎಂದರು.
ಕಾಂಗ್ರೆಸ್ ಒಂದರಲ್ಲಿ ಗೆಲ್ಲಲಿಲ್ಲ:
ದೇಶದಲ್ಲಿ ಮೊನ್ನೆ ನಡೆದ 28 ವಿಧಾನಪರಿಷತ್ ಸದಸ್ಯ ಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಒಂದರಲ್ಲಿಯೂ ಗೆಲುವು ಕಂಡಿಲ್ಲ. ಇದೇ ಪರಿಸ್ಥಿತಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಸಂದರ್ಭದಲ್ಲಿ ನಂತರ ಚುನಾವಣೆಯಲ್ಲಿಯೂ ಸಹ ವೈಟ್ವಾಷ್ ಆಗಿತ್ತು. ಅಂದಿನ ಕಾಲಘಟ್ಟದಲ್ಲಿ ಎಸ್ಐಆರ್ ಮಾಡಲಾಗಿರಲಿಲ್ಲ. ಜೊತೆಗೆ, ಇವಿಎಂ ಮಿಷನ್ ಇರಲಿಲ್ಲ. ಬ್ಯಾಲೇಟ್ ಪೇಪರ್ನಲ್ಲಿಯೇ ಚುನಾವಣೆ ನಡೆಸಲಾಗಿತ್ತು ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಟಾಂಗ್ ನೀಡಿದರು.
ಅರಾಜಕತೆಗೆ ಶಾಂತಿ ಮತ್ತು ಸೌಹಾರ್ದತೆಯೇ ಪರಿಹಾರವಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಮೂಲಕ ದೇಶದ ಏಕತೆ, ಶಾಂತಿ ಮತ್ತು ಅಭಿವೃದ್ಧಿಯನ್ನು ಕಾಪಾಡಲು ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ದೇಶದಲ್ಲಿ ಸತ್ಯಾಂಶಗಳನ್ನು ಮರೆಮಾಚಿ ಸುಳ್ಳು ಮಾಹಿತಿಯನ್ನು ಸತ್ಯವೆಂಬಂತೆ ಬಿಂಬಿಸುವ ಪ್ರಯತ್ನಗಳು, ಜನರಲ್ಲಿ ಅನಗತ್ಯ ಗೊಂದಲ ಮತ್ತು ಅಪನಂಬಿಕೆಯನ್ನು ಮೂಡಿಸುವ ರಾಜಕೀಯ ಬೆಳವಣಿಗೆಗಳು ಆತಂಕಕಾರಿಯಾಗಿದೆ. ರಾಜಕೀಯ ಲಾಭಕ್ಕಾಗಿ ಜನರನ್ನು ದಾರಿತಪ್ಪಿಸುವುದು, ಸಮಾಜದಲ್ಲಿ ಭಿನ್ನಾಭಿಪ್ರಾಯಗಳನ್ನು ಹೆಚ್ಚಿಸುವ ಪ್ರಯತ್ನಗಳು ದೇಶದ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹಾನಿಕಾರಕವಾಗಿವೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ. ಆದರೆ, ರಾಜಕೀಯ ಭಿನ್ನಾಭಿಪ್ರಾಯಗಳು ಸಮಾಜದಲ್ಲಿ ದ್ವೇಷ, ಅಶಾಂತಿ ಮತ್ತು ಅರಾಜಕತೆಗೆ ಕಾರಣವಾಗಬಾರದು. ಯಾವುದೇ ಮಾಹಿತಿಯನ್ನು ನಂಬುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು, ಸಂವಿಧಾನದ ಆಶಯಗಳಿಗೆ ಗೌರವ ನೀಡುವುದು ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು.
ರಾಜ್ಯ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ್ ಗೌಡ ಮಾತನಾಡಿ, ಚುನಾವಣಾ ಆಯೋಗ ದೇಶದಲ್ಲಿ ಈತನಕ ಒಟ್ಟು 12ಬಾರಿ ಎಸ್ಐಆರ್ ಮತಪರಿಷ್ಕರಣೆ ಕಾರ್ಯ ಮಾಡಿದೆ. ಇದೇ ಮೊದಲ ಬಾರಿಗೆ ಅಲ್ಲ. ಪ್ರತಿ 20 ವರ್ಷಕ್ಕೊಮ್ಮೆ ಎಸ್ಐಆರ್ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಎಸ್ಐಆರ್ಪ್ರಕ್ರಿಯೆ ವೇಳೆ ನೊಂದಾಯಿತ ಚುನಾವಣಾ ಪಕ್ಷಗಳ ಕಾರ್ಯಕರ್ತರ ಬಿಎಲ್ಒ -2ಗಳಾಗಿ ನೇಮಿಸಲಾಗಿತ್ತು. ಪ್ರಕ್ರಿಯೆ ನಡೆಯುವ ವೇಳೆ ಯಾರ ಹೆಸರು ಸೇರ್ಪಡೆ ಮಾಡಬೇಕು. ಮತ್ತು ಮಾಡಬಾರದು ಎಂಬ ನಿರ್ಧಾರ ಮಾಡುವ ಅವಕಾಶವಿತ್ತು. ಇಷ್ಟೆಲ್ಲಾ ಅನುಕೂಗಳಿದ್ದರೂ, ಎಸ್ಐಆರ್ ಅನ್ನು ಟೀಕಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಕೇರಳದ ಸಿಎಂ ಅವರು ಎಸ್ಐಆರ್ ಪ್ರಕ್ರಿಯೆ ಅನ್ನು ಒಪ್ಪಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಅವರು ತಮ್ಮ ಪಕ್ಷದ ಎಲ್ಲಾ ಬ್ಲಾಕ್ ಮಟ್ಟದ ಪದಾಧಿಕಾರಿಗಳನ್ನು ಕರೆಸಿ, ಈ ಬಗ್ಗೆ ಮಾಹಿತಿ ನೀಡಿದ್ದರು. ಜೊತೆಗೆ, ಅಂದಿನ ಸಭೆಗೆ ಹಾಜರಾಗದ ಪದಾಧಿಕಾರಿಗಳಿಗೆ ನೋಟಿಸ್ ಸಹ ನೀಡಲಾಗಿತ್ತು ಎಂದರು.
ಈ ಎಸ್ಐಆರ್ ಪ್ರಕ್ರಿಯೆನ್ನು ಸಿಎಂ ಡಿ.ಕೆ.ಶಿವಕುಮಾರ್ ಒಪ್ಪಿಕೊಳ್ಳಲಿದ್ದಾರೆ. ದೇಶದಲ್ಲಿ 101 ಸಂಘಟನೆಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಶೀಘ್ರದಲ್ಲಿಯೇ ದೇಶದಲ್ಲಿ ನಡೆಯಲಿರುವ ಮೂರು ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನಕ್ಕೂ ಬರುವುದಿಲ್ಲ ಎಂದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ರಾಮನಗರ ತಾಲೂಕು ಅಧ್ಯಕ್ಷ ಗೌತಮ್ ಗೌಡ, ಮಾಗಡಿ ತಾಲೂಕು ಅಧ್ಯಕ್ಷ ಪ್ರಸಾದ್ ಗೌಡ, ಪರಿಷತ್ ಸದಸ್ಯ ಸುರೇಶ್, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಕಾಳಯ್ಯ, ನಗರ ಘಟಕ ಅಧ್ಯಕ್ಷ ಚಂದನ್ ಮೊರೆ, ಬಿಜೆಪಿ ಮುಖಂಡರಾದ ಜಿ.ವಿ. ಪದ್ಮನಾಭ್ , ಆರ್.ವಿ.ಸುರೇಶ್, ರುದ್ರದೇವರು, ವಕ್ತಾರ ಸಿದ್ದು, ಜಯಕುಮಾರ್, ಚನ್ನಪ್ಪ, ಕೆಂಪರಾಜು, ಚಂದ್ರಶೇಖರ್, ಚೇತನ್, ರಾಮಕೃಷ್ಣಯ್ಯ, ಮಹಾದೇವ್ ಇದ್ದರು.



