Wednesday, November 30, 2022

Latest Posts

ಪ್ರತಿ ವರ್ಷ 8 ಸಾವಿರ ಶಾಲಾ ಕೊಠಡಿ ನಿರ್ಮಾಣ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ, ಕಲಬುರಗಿ

ರಾಜ್ಯದಲ್ಲಿ ಮುಂದಿನ 3 ವರ್ಷಗಳಲ್ಲಿ ಪ್ರತಿ ವರ್ಷ 8,000 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಸೋಮವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಕಲಬುರಗಿ ತಾಲೂಕಿನ ಮಡಿಯಾಳ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಕಾರ್ಯಕ್ರಮದಡಿ ಶಾಲಾ ಕೊಠಡಿಗಳ ನಿರ್ಮಾಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಇದರ ಭಾಗವಾಗಿ ಪ್ರಸಕ್ತ ಸಾಲಿನ 8,000 ಕೊಠಡಿ ನಿರ್ಮಾಣ ಗುರಿ ಪೈಕಿ ,ಸೋಮವಾರ ರಾಜ್ಯದಾದ್ಯಂತ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ 7,601 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಇದೇ ವರ್ಷದಲ್ಲಿ ಕೊಠಡಿ ನಿರ್ಮಾಣವಾಗಲಿವೆ. ಇದರಲ್ಲಿ 2,000 ಕೊಠಡಿ ಕಲ್ಯಾಣ ಕರ್ನಾಟಕದಲ್ಲಿಯೇ ನಿರ್ಮಿಸಲಾಗುತ್ತಿದೆ. ಇದಲ್ಲದೆ ಮುಂದಿನ 2 ವರ್ಷದಲ್ಲಿ ಸಹ ತಲಾ 8,000 ಕೊಠಡಿ ನಿರ್ಮಿಸುವ ಮೂಲಕ ಶಾಲೆಗಳಲ್ಲಿನ ಮೂಲಸೌಕರ್ಯ ಬಲಪಡಿಸಲಾಗುವುದು ಎಂದು ತಿಳಿಸಿದರು.

ಈ ನಾಡು ಕಟ್ಟುವ ಬೇರು ಶಿಕ್ಷಣದಲ್ಲಿದೆ. ಸಂಪದ್ಭರಿತ ನಾಡು ನಿರ್ಮಾಣಕ್ಕೆ ಶಿಕ್ಷಣ ಮೂಲ ಕಾರಣವಾಗಿದೆ. ವಿಶೇಷವಾಗಿ ರೈತರ, ಮೀನುಗಾರರ, ದೀನ-ದಲಿತರ, ತಾಂಡಾ ನಿವಾಸಿಗಳ ಹೆಣ್ಣು ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಾಡಿನ ಕಟ್ಟ ಕಡೆಯ ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸಂಕಲ್ಪ ನಮ್ಮದಾಗಿದ್ದು, ಇದಕ್ಕಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಅಧಿಕಾರ ವಹಿಸಿದ ದಿನದಂದತೆ ರೈತ ವಿದ್ಯಾ ನಿಧಿ ಯೋಜನೆ ಜಾರಿಗೊಳಿಸಿದ್ದೇನೆ. ಶಾಲಾ ದುರಸ್ತಿಗೆಂದೇ 200 ಕೋಟಿ ರೂ. ನೀಡಲಾಗಿದೆ. ಮಹಿಳೆಯರ ಸಬಲೀಕರಣಕ್ಕೆ 30 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!