ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ರಾಜ್ಯದ ಹಲವೆಡೆಗಳಲ್ಲಿ ಸುರಿದ ಮಳೆ ಸೋಮವಾರಕ್ಕೂ ಕಾಲಿಟ್ಟಿದ್ದು, ಕೆಲವೆಡೆ ಮಳೆ ಹಾನಿಯುಂಟು ಮಾಡಿದೆ.
ವಿವಿಧೆಡೆಗಿದೆ ವರುಣಕೃಪೆ
ಮೇ 17ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯಂತೆ ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯಾಗಲಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ದಾವಣಗೆರೆ, ಚಿತ್ರದುರ್ಗ, ಪಾವಗಢ, ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯಪುರ, ಬೀದರ್ ಹಾಗೂ ಗುಲ್ಬರ್ಗ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ.
ಕರಾವಳಿಯಲ್ಲಿ ಹೇಗೆ?
ಕರಾವಳಿಯಲ್ಲಿ ಸೋಮವಾರ ಮೋಡ ಮುಸುಕಿದ ವಾತಾವರಣ ಮುಂದುವರಿದಿದ್ದು, ಕೆಲವೆಡೆ ಮಳೆಯಾಗುತ್ತಿದೆ. ಕಾಸರಗೋಡು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಉತ್ತಮ ಮಳೆಯ ಸಾಧ್ಯತೆಯಿದ್ದು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆ ಸುರಿಯುವ ಮುನ್ಸೂಚನೆ ಇದೆ.