‘ಮಹಾ’ ರಾಜ್ಯಪಾಲರ ವಿವಾದಾತ್ಮಕ ಹೇಳಿಕೆ: ಈ ಮಾತು ಒಪ್ಪಲು ಸಾಧ್ಯವಿಲ್ಲ ಎಂದ ಸಿಎಂ, ಡಿಸಿಎಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರರಾಜ್ಯಪಾಲರ ಹೇಳಿಕೆಯೊಂದು ಇದೀಗ ಮರಾಠಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಗುಜರಾತಿ, ರಾಜಸ್ಥಾನಿ ಮಾರ್ವಾಡಿಗಳ ಕೊಡುಗೆ ಕುರಿತು ಭಾಷಣದಲ್ಲಿ ಉಲ್ಲೇಖಿಸುವಾಗ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮುಂಬೈ ಆರ್ಥಿಕ ನಗರಿಯಾಗಿ ಬೆಳೆಯಲು ರಾಜಸ್ಥಾನಿ, ಗುಜರಾತಿಗಳ ಕೊಡುಗೆ ಅಪಾರ. ಇವರಿಲ್ಲದೇ ಇದ್ದರೆ ಮುಂಬೈನಲ್ಲಿ ಹಣವೇ ಇರುವುದಿಲ್ಲ. ಮುಂಬೈ ಈ ಮಟ್ಟಕ್ಕೆ ಬೆಳೆಯುತ್ತಲೇ ಇರಲಿಲ್ಲ ಎಂದು ಕೋಶಿಯಾರಿ ಹೇಳಿದ್ದಾರೆ.

ಈ ಹೇಳಿಕೆಗೆ ಶಿವಸೇನೆ, ಕಾಂಗ್ರೆಸ್ ಸೇರಿದಂತೆ ಮಹಾರಾಷ್ಟ್ರ ಜನತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ವತಃ ಮುಖ್ಯಮಂತ್ರಿ ಏಕನಾಥ್ ಶಿಂಧೆ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಕೋಶಿಯಾರಿ ಮಾತು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ಸಾಂವಿಧಾನಿಕ ಹುದ್ದೆ ಹೊಂದಿದವರು ಯಾವುದೇ ಸಮುದಾಯವನ್ನು, ಭಾಷಿಗರನ್ನು ಅವಮಾನಿಸುವುದು ಸರಿಯಲ್ಲ. ಕೋಶಿಯಾರಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ವಿವಾದಾತ್ಮಕ ಮಾತುಗಳೇ ಅನಗತ್ಯ. ಇದು ಅವರ ವೈಯುಕ್ತಿ ಅಭಿಪ್ರಾಯ. ಆದರೆ ಒಂದು ಸಮುದಾಯಕ್ಕೆ ನೋವುಂಟು ಮಾಡಿದೆ. ಮರಾಠಿಗರ ಸಾಮರ್ಥ್ಯದಿಂದಲೇ ಮುಂಬೈ ವಿಶ್ವಮಟ್ಟದಲ್ಲಿ ಅತೀ ದೊಡ್ಡ ನಗರವಾಗಿ ಬೆಳೆದು ನಿಂತಿದೆ. ಮರಾಠಿಗರು ಮಹಾರಾಷ್ಟ್ರದ ಸಂಸ್ಕೃತಿ, ಘನೆತೆ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ದೇಶದ ಇತರ ರಾಜ್ಯದ ಅದೆಷ್ಟೋ ಮಂದಿಗೆ ಮುಂಬೈ ಕರ್ಮ ಭೂಮಿಯಾಗಿದೆ. ಹೀಗಾಗಿ ಮರಾಠಿಗರನ್ನು ಅವಮಾನಿಸುವ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಸಿಎಂ ಏಕನಾಥ್ ಶಿಂಧೆ ಹೇಳಿದ್ದಾರೆ.

ರಾಜ್ಯಪಾಲರ ಮಾತನ್ನು ಒಪ್ಪುವುದಿಲ್ಲ: ಫಡ್ನವಿಸ್
ಮುಂಬೈ ಹಾಗೂ ಮಹಾರಾಷ್ಟ್ರದ ಅಭಿವೃದ್ಧಿಯಲ್ಲಿ ಮರಾಠಿಗರ ಕೊಡುಗೆಯೇ ಅಪಾರ. ಮರಾಠಿಗರಿಂದಲೇ ರಾಜ್ಯ ಈ ಮಟ್ಟಕ್ಕೆ ಬೆಳೆದಿದೆ. ರಾಜ್ಯಪಾಲರ ಮಾತನ್ನು ಒಪ್ಪುವುದಿಲ್ಲ ಎಂದು ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಉದ್ವವ್ ಠಾಕ್ರೆ ಖಂಡನೆ
ರಾಜ್ಯಪಾಲರನ್ನು ಮನೆಗೆ ಕಳುಹಿಸಬೇಕೇ ಅಥವಾ ಜೈಲಿಗೆ ಕಳುಹಿಸಬೇಕೇ ಎಂದು ನಿರ್ಧರಿಸುವ ಸಮಯ ಬಂದಿದೆ.ಮುಂಬೈ ಮತ್ತು ಥಾಣೆಯಲ್ಲಿ ಶಾಂತಿಯುತವಾಗಿ ಬದುಕುತ್ತಿರುವ ಹಿಂದೂಗಳನ್ನು ರಾಜ್ಯಪಾಲರು ಧ್ರುವೀಕರಣಗೊಳಿಸುತ್ತಿದ್ದಾರೆ ಎಂದು ಉದ್ವವ್ ಠಾಕ್ರೆ ಆರೋಪಿಸಿದ್ದಾರೆ.

ಕೋಶಿಯಾರಿ ಸ್ಪಷ್ಟನೆ
ವಿವಾದ ಹೆಚ್ಚಾಗುತ್ತಿದ್ದಂತೆ ರಾಜ್ಯಪಾಲ ಕೋಶಿಯಾರಿ ಸ್ಪಷ್ಟನೆ ನೀಡಿದ್ದಾರೆ. ಮರಾಠಿಗರನ್ನು ಅವಮಾನಿಸುವ ಉದ್ದೇಶ ನನಗಿಲ್ಲ. ನನ್ನ ಹೇಳಿಕೆಯನ್ನೇ ತಪ್ಪಾಗಿ ಅರ್ಥೈಸಲಾಗಿದೆ. ಒಂದು ಸಮುದಾಯವನ್ನು, ಭಾಷಿಕರನ್ನು ದೂಷಿಸುವ ಕಾರ್ಯಕ್ಕೆ ಇಳಿಯುವುದಿಲ್ಲ. ಅನಗತ್ಯ ವಿವಾದಗಳು ಬೇಡ ಎಂದು ಕೋಶಿಯಾರಿ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!