August 4, 2026
Tuesday, August 4, 2026
spot_img

ನಟಿ ತ್ರಿಷಾ ವಿರುದ್ಧ ಅವಹೇಳನಕಾರಿ ಹೇಳಿಕೆ ವಿವಾದ: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತಮಿಳುನಾಡಿನ ರಾಜಕಾರಣದಲ್ಲಿ ಇಂದು ಬೆಳ್ಳಂಬೆಳಿಗ್ಗೆ ತೀವ್ರ ರಾಜಕೀಯ ಸಂಚಲನ ಮೂಡಿದ್ದು, ನಟಿ ತ್ರಿಷಾ ಕೃಷ್ಣನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್‌ನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ವಿವಾದಕ್ಕೆ ಕಾರಣವಾದ ತಂಜಾವೂರು ಭಾಷಣ

ತಂಜಾವೂರಿನಲ್ಲಿ ನಡೆದ ಕಾವೇರಿ ನೀರು ಹಂಚಿಕೆ ವಿವಾದದ ಪ್ರತಿಭಟನಾ ರ್ಯಾಲಿಯಲ್ಲಿ ಉದಯನಿಧಿ ಸ್ಟಾಲಿನ್ ಭಾಷಣ ಮಾಡುತ್ತಿದ್ದರು. ಈ ವೇಳೆ ಅವರು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾಗ, ನೆರೆದಿದ್ದ ಜನಸಮೂಹವು ನಟಿ ತ್ರಿಷಾ ಹೆಸರನ್ನು ಕೂಗಲು ಪ್ರಾರಂಭಿಸಿತು. ಇದಕ್ಕೆ ಪ್ರತಿಕ್ರಿಯಿಸಿದ್ದ ಉದಯನಿಧಿ, “ನೀರು ಬೇರೆಲ್ಲೂ ತಲುಪುತ್ತದೋ ಇಲ್ಲವೋ, ಅಲ್ಲಿಗೆ ತಲುಪಬೇಕು” ಎಂದು ದ್ವಂದ್ವಾರ್ಥದಲ್ಲಿ (Double Entendre) ಕಾಮೆಂಟ್ ಮಾಡಿದ್ದರು. ಇದನ್ನು ನಟಿ ತ್ರಿಷಾ ಅವರನ್ನು ಗುರಿಯಾಗಿಸಿಕೊಂಡು ಮಾಡಿದ ಮಹಿಳಾ ವಿರೋಧಿ ಮತ್ತು ಅಶ್ಲೀಲ ಕೃತ್ಯ ಎಂದು ಕಟುವಾಗಿ ಟೀಕಿಸಲಾಗಿದೆ.

ಟಿವಿಕೆ ಮತ್ತು ಮಹಿಳಾ ಆಯೋಗದಿಂದ ದೂರು:

ಮುಖ್ಯಮಂತ್ರಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷದ ತಂಜಾವೂರು ಕೇಂದ್ರ ಜಿಲ್ಲಾ ಮಹಿಳಾ ವಿಭಾಗದ ಸಂಘಟಕಿ ಎಸ್. ಭೈರವಿ, ತಂಜಾವೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಉದಯನಿಧಿ ವಿರುದ್ಧ ದೂರು ದಾಖಲಿಸಿದ್ದರು. ಇದರ ಜತೆಗೆ ಟಿವಿಕೆ ಪಕ್ಷವು ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ನೀಡಿ ಕಠಿಣ ಕ್ರಮಕ್ಕೆ ಒತ್ತಾಯಿಸಿತ್ತು. ಈ ದೂರಿನ ಅನ್ವಯ ಪೊಲೀಸರು ಐಟಿ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ಬಂಧನ ಪ್ರಕ್ರಿಯೆ ನಡೆಸಿದ್ದಾರೆ.

ಬಂಧನವನ್ನು ‘ಜೋಕ್’ ಎಂದ ಉದಯನಿಧಿ:

ಪೊಲೀಸರು ತಮ್ಮ ನಿವಾಸಕ್ಕೆ ಆಗಮಿಸಿ ವಶಕ್ಕೆ ಪಡೆಯುತ್ತಿದ್ದಾಗ ಉದಯನಿಧಿ ಸ್ಟಾಲಿನ್ ಮುಗುಳ್ನಗುತ್ತಲೇ ಹೊರಬಂದಿದ್ದು, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಈ ಬಂಧನ ಒಂದು ದೊಡ್ಡ ಜೋಕ್, ಇದನ್ನು ನಾನು ಕಾನೂನಾತ್ಮಕವಾಗಿ ಎದುರಿಸುತ್ತೇನೆ” ಎಂದು ಸವಾಲು ಹಾಕಿದ್ದಾರೆ. ಜಂಟಿ ಪೊಲೀಸ್ ಕಮಿಷನರ್ ನೇತೃತ್ವದ ತಂಡವು ಅವರನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆಗಾಗಿ ತಂಜಾವೂರಿಗೆ ಕರೆದೊಯ್ಯಲಾಗುತ್ತಿದೆ.

ಡಿಎಂಕೆ ವಿರುದ್ಧ ಮುಗಿಬಿದ್ದ ಬಿಜೆಪಿ

ಇದಕ್ಕೂ ಮುನ್ನ ತಮಿಳುನಾಡು ಬಿಜೆಪಿಯೂ ಸಹ ಉದಯನಿಧಿ ಹೇಳಿಕೆಯನ್ನು ಖಂಡಿಸಿ ಅವರ ಬಂಧನಕ್ಕೆ ಒತ್ತಾಯಿಸಿತ್ತು. “ತಂಜಾವೂರಿನಲ್ಲಿ ಮುಖ್ಯಮಂತ್ರಿ ವಿಜಯ್ ಮತ್ತು ತ್ರಿಷಾ ಕುರಿತು ಉದಯನಿಧಿ ಸ್ಟಾಲಿನ್ ನೀಡಿರುವ ದ್ವಂದ್ವಾರ್ಥದ ಭಾಷಣವು ಅತ್ಯಂತ ಅಸಹ್ಯಕರ, ಅಶ್ಲೀಲ, ವಿಕೃತ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ತಾಯಿ, ಹೆಂಡತಿ ಮತ್ತು ಮಗಳನ್ನು ಹೊಂದಿರುವ ಯಾವುದೇ ಒಬ್ಬ ರೌಡಿ ಅಥವಾ ಕಳ್ಳನೂ ಇಷ್ಟು ವಿಕೃತವಾಗಿ ಮಾತನಾಡಲು ಸಾಧ್ಯವಿಲ್ಲ. ಇಂತಹ ಮಾತುಗಳನ್ನಾಡುವವರನ್ನು ಯಾವುದೇ ತಾಯಿ, ಹೆಂಡತಿ ಅಥವಾ ಮಗಳು ಕ್ಷಮಿಸುವುದಿಲ್ಲ. ಈ ರೀತಿ ಮಾತನಾಡುತ್ತಿರುವುದನ್ನು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮೌನವಾಗಿ ವೀಕ್ಷಿಸುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ಬಿಜೆಪಿ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ ಕಿಡಿಕಾರಿದ್ದಾರೆ.

ಇದನ್ನೂ ಓದಿ:

ರಾಜಕೀಯ ದ್ವೇಷದ ಆರೋಪ ತಳ್ಳಿಹಾಕಿದ ಟಿವಿಕೆ:

ಉದಯನಿಧಿ ಬಂಧನವನ್ನು ಡಿಎಂಕೆ ತೀವ್ರವಾಗಿ ಖಂಡಿಸಿದ್ದು, ಇದು ರಾಜಕೀಯ ಪ್ರೇರಿತ ದ್ವೇಷದ ನಡವಳಿಕೆ ಎಂದು ದೂರಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಟಿವಿಕೆ ನಾಯಕ ಅಮೆರಿಕೈ ನಾರಾಯಣನ್, ಉದಯನಿಧಿಯನ್ನು ಮುಖ್ಯಮಂತ್ರಿ ವಿಜಯ್ ಅಥವಾ ಟಿವಿಕೆ ವಿರುದ್ಧ ಮಾತನಾಡಿದ್ದಕ್ಕಾಗಿ ಬಂಧಿಸಿಲ್ಲ, ಬದಲಿಗೆ ಸಾರ್ವಜನಿಕವಾಗಿ ಮಹಿಳೆಯನ್ನು ಅಪಮಾನಿಸಿದ್ದಕ್ಕಾಗಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !