ಮುಚ್ಚಿ ಹಾಕಲೆತ್ನಿಸಿದ್ದ ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ಸಂಬಂಧಿಕರಿಂದಲೇ ನಡೆಯಿತು ಕೃತ್ಯ!

ಹೊಸದಿಗಂತ ವರದಿ,ಮಡಿಕೇರಿ:

ಮುಚ್ಚಿ ಹಾಕಲೆತ್ನಿಸಿದ ಕೊಲೆ ಪ್ರಕರಣವೊಂದನ್ನು ಪತ್ತೆ ಹಚ್ಚುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.
ಕುಶಾಲನಗರ ಗ್ರಾಮಾಂತರ ವ್ಯಾಪ್ತಿಯ ಸುಂದರನಗರದ ನಿವಾಸಿ ಸುರೇಶ ಎಂಬವರೇ ಕೊಲೆಯಾದವರಾಗಿದ್ದು, ಅವರ ತಂಗಿ ಭವ್ಯಾ, ಸಂಬಂಧಿ ಹರೀಶ ಹಾಗೂ ಸ್ನೇಹಿತ ಮಹೇಶ ಎಂಬವರನ್ನು ಬಂಧಿಸಲಾಗಿದೆ.
ಸುಂದರ ನಗರ ನಿವಾಸಿ ಸುರೇಶ್ ಸಾವನ್ನಪ್ಪಿರುವುದಾಗಿ ಏ. 20 ರಂದು ಆತನ ತಂಗಿ ಭವ್ಯಾ, ಆಕೆಯ ನೆಂಟರು ಹಾಗೂ ಸ್ನೇಹಿತರಿಗೆಲ್ಲ ಮಾಹಿತಿ ನೀಡಿದ್ದರು. ಆದರೆ ಮೃತದೇಹವನ್ನು ನೋಡಲು ಬಂದ ಸುರೇಶನ ಸ್ನೇಹಿತ ದೇಹದ ಮೇಲಿದ್ದ ಗುರುತುಗಳನ್ನು ಗಮನಿಸಿ ಅನುಮಾನಗೊಂಡು ಕುಶಾಲನಗರ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದರ ಆಧಾರದ ಮೇಲೆ ಅನುಮಾನಾಸ್ಪದ ಸಾವು ಎಂದು ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ವಿಧಿವಿಜ್ಞಾನ ತಜ್ಞ ವೈದ್ಯರಿಂದ ಮಾಡಿಸಿದ್ದರು.
ಮರಣೋತ್ತರ ಪರೀಕ್ಷೆಯ ವೇಳೆ ಸುರೇಶನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಏ.25ರಂದು ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಸಂಪೂರ್ಣ ಮಾಹಿತಿ ಕಲೆ ಹಾಕಿ ಸುರೇಶನ ಮನೆಯವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆತನ ತಂಗಿ ಹಾಗೂ ಆಕೆಯ ಸಂಬಂಧಿಕ ಹರೀಶ ಮತ್ತು ಆಕೆಯ ಸ್ನೇಹಿತನಾದ ಮುಳ್ಳುಸೋಗೆ ಜನತಾ ಕಾಲೋನಿ ನಿವಾಸಿ ಮಹೇಶ ಅವರು ಸೇರಿಕೊಂಡು ಊಟದಲ್ಲಿ ನಿದ್ರೆ ಮಾತ್ರೆಯನ್ನು ಸೇರಿಸಿದ್ದಲ್ಲದೆ, ಸುರೇಶನು ನಿದ್ರೆಯಲ್ಲಿರುವಾಗ ಹರೀಶ ಹಾಗೂ ಮಹೇಶ ಇಬ್ಬರೂ
ಸುರೇಶನನ್ನು ಉಸಿರು ಗಟ್ಟಿಸಿ, ಕುತ್ತಿಗೆ ಅಮುಕಿ ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರಡಿಸಲಾಗಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಎ. ಅಯ್ಯಪ್ಪ ಹಾಗೂ ಸೋಮವಾರಪೇಟೆ
ಉಪಾಧೀಕ್ಷಕ ಹೆಚ್.ಎಂ. ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ
ಎಂ. ಮಹೇಶ್ ಅವರ ನೇತೃತ್ವದಲ್ಲಿ ಕುಶಾಲನಗರ ಗ್ರಾಮಾಂತರ ಉಪನಿರೀಕ್ಷಕ ಚಂದ್ರಶೇಖರ್, ಪ್ರೊಬೆಷನರಿ ಪಿಎಸ್‌ಐ ನವೀನ್ ಹಾಗೂ ಸಿಬ್ಬಂದಿಗಳಾದ ಪ್ರವೀಣ್, ಅಜಿತ್, ಮಂಜುನಾಥ್, ಶನಂತ್, ಚಾಲಕ ಯೋಗೇಶ್ ಅವರು ಪ್ರಕರಣವನ್ನು ಭೇದಿಸುವಲ್ಲಿ ಶ್ರಮಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!