Friday, December 9, 2022

Latest Posts

ಚೋಳರು ಹಿಂದುಗಳಾಗಿರಲಿಲ್ಲ ಎಂಬುದಕ್ಕಿಂತ ಬಾಲಿಶವಾದ ಇನ್ನೊಂದು ಸುಳ್ಳನ್ನು ಹೇಳಲು ಸಾಧ್ಯವೇ?

ಹೊಸದಿಗಂತ ಡಿಜಿಟಲ್ ವಿಶ್ಲೇಷಣೆ

ಪೊನ್ನಿಯನ್ ಸೆಲ್ವಂ ಅರ್ಥಾತ್ ಪಿಎಸ್-1 ಎಂಬ ಚೋಳ ರಾಜನ ಕತೆಯ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡ್ತಾ ಇದ್ದ ಹಾಗೆ ವಿವಾದಗಳೂ ಸದ್ದು ಮಾಡುವುದಕ್ಕೆ ಶುರುವಾಗಿವೆ.

ತಮಿಳು ನಿರ್ದೇಶಕ ವೆಟ್ರಿಮಾರನ್ ಹೇಳಿದ್ರು- ರಾಜ ರಾಜ ಚೋಳನನ್ನು ಹಿಂದು ರಾಜ ಅಂತ ಹೇಳುವುದಕ್ಕಾಗುವುದಿಲ್ಲ ಯಾಕಂದ್ರೆ ಆ ಕಾಲದಲ್ಲಿ ಹಿಂದು ಅನ್ನೋ ಪರಿಕಲ್ಪನೆಯೇ ಇರಲಿಲ್ಲ ಅಂತ. ಇದಕ್ಕೆ ಇತ್ತೀಚೆಗೆ ದ್ರಾವಿಡ ರಾಜಕಾರಣದಲ್ಲೇ ಹೆಚ್ಚು ಆಸಕ್ತರಾಗಿರುವ ಕಮಲ ಹಾಸನ್ ಸಹ ದನಿಗೂಡಿಸಿ, ಈ ನಿರ್ದೇಶಕ ಹೇಳಿದ್ದು ಸರಿ ಇದೆ ಅಂತ ವಾದ ಮಾಡಿರುವುದು ಈಗ ಚರ್ಚೆಯ ವಿಷಯ.
ಇದರ ಸತ್ಯದ ಮೇಲೆ ಬೆಳಕು ಚೆಲ್ಲೋದಕ್ಕೆ ತೀರ ಕಷ್ಟಪಡಬೇಕಾದ ಪ್ರಮೇಯವೇ ಇಲ್ಲ. ಯಾಕೆಂದರೆ ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ಅತಿಭವ್ಯ ದೇವಾಲಯಗಳು ಕಮಲ ಹಾಸನ್ ಥರದವರ ವಿತಂಡವಾದವನ್ನು ತುಂಬ ಸುಲಭಕ್ಕೆ, ಸಾಮಾನ್ಯರಿಗೂ ಅರ್ಥವಾಗುವಂತೆ ಧ್ವಂಸ ಮಾಡಿ ಬಿಡುತ್ತವೆ.

ತಮಿಳುನಾಡಿನ ತಂಜಾವೂರಿನಲ್ಲಿರುವ ಬೃಹದೀಶ್ವರ ದೇವಾಲಯ ಇವತ್ತಿಗೆ ಯುನೆಸ್ಕೊ ಪಾರಂಪರಿಕ ತಾಣ. ಇದು ಒಂದನೇ ರಾಜ ರಾಜ ಚೋಳನ ಕಾಲದಲ್ಲಿ ನಿರ್ಮಾಣಗೊಂಡಿರುವಂಥದ್ದು. ಹೆಸರೇ ಸೂಚಿಸೋ ಹಾಗೆ ಈಶ್ವರನ ದೇವಸ್ಥಾನ. ಇವತ್ತಿನ ಅರಿಯಲೂರು ಜಿಲ್ಲೆಯಲ್ಲಿರುವ ಗಂಗೇಯಕೊಂಡ ಚೋಳಪುರಂನ ಶಿವ ದೇವಸ್ಥಾನ ಒಂದನೇ ರಾಜೇಂದ್ರ ಎಂಬ ಚೋಳ ದೊರೆಯ ಕಾಲದಲ್ಲಿ ನಿರ್ಮಾಣವಾಗಿದ್ದು. ಇದೂ ಶಿವ ದೇವಸ್ಥಾನವೇ. ಕುಂಭಕೋಣದಲ್ಲಿರುವ ಐರಾವತೇಶ್ವರ ದೇವಸ್ಥಾನ ಚೋಳರ ಎರಡನೇ ರಾಜರಾಜನ ಅವಧಿಯಲ್ಲಿ ನಿರ್ಮಾಣವಾಗಿದೆ.

ಹೀಗೆ ಚೋಳರ ಕಾಲದ, ಇವತ್ತಿಗೂ ದಂಗು ಬಡಿಸುವ ಹಲವು ದೇವಾಲಯಗಳನ್ನು ಪಟ್ಟಿ ಮಾಡುತ್ತ ಹೋಗಬಹುದು. ಪ್ರಾತಿನಿಧಿಕವಾಗಿ ಯುನೆಸ್ಕೊ ಪಾರಂಪರಿಕ ತಾಣವಾಗಿರುವ ಮೂರು ದೇವಾಲಯಗಳನ್ನು ಹೆಸರಿಸಿದ್ದಷ್ಟೆ. ಇದೇ ಪಿಎಸ್-1 ಚಿತ್ರದ ಪ್ರಮುಖ ನಟ ವಿಕ್ರಂ, ತಮ್ಮ ಸಿನಿಮಾದ ಪರಿಚಯದ ವೇಳೆ, ಆರೇಳು ಭೂಕಂಪಗಳನ್ನು ತಾಳಿಕೊಂಡು ನಿಂತಿರುವಂಥ ಚೋಳರ ದೇವಸ್ಥಾನ ನಿರ್ಮಾಣ ಕೌಶಲವನ್ನು ಕೊಂಡಾಡಿದ್ದರು.

ಇವೆಲ್ಲ ಕುರುಹುಗಳು ಇವತ್ತಿಗೂ ಕಣ್ಣೆದುರಿಗೆ ಇರುವಾಗ ಚೋಳರು ಹಿಂದು ರಾಜರುಗಳಾಗಿರಲಿಲ್ಲ ಅಂತಂದ್ರೆ ಏನರ್ಥ?
ಹೀಗೆಲ್ಲ ದೇವಸ್ಥಾನಗಳನ್ನು ಕಟ್ಟಿಸಿರೋರನ್ನು ಅಲ್ಲಿವರೆಗೆ ಹಿಂದುಗಳೆಂದು ಕರೆಯುವ ರೂಢಿ ಇರಲಿಲ್ಲ ಎಂಬ ‘ಟೆಕ್ನಿಕಲ್’ ವಾದ ಮಾತ್ರವೇ ಕಮಲ ಹಾಸನ್ ಥರದವರದ್ದು ಎಂದಾದರೆ ಉತ್ತರ ಸರಳ- ನೀವು ಹಿಂದು ಎಂದು ನಂತರದಲ್ಲೇ ಗುರುತಿಸಿದ್ದರೂ ಅವರಲ್ಲಿದ್ದದ್ದು ಸನಾತನ ಪ್ರಜ್ಞೆಯೇ ಆಗಿರಲಿಲ್ಲವೇ? ಬೃಹತ್ ದೇವಾಲಯಗಳ ನಿರ್ಮಾಣ, ಅಷ್ಟೇ ಅಲ್ಲ, ಅದರ ಸುತ್ತ ಇದ್ದ ಪರಂಪರೆಯ ಅಭ್ಯಾಸಕ್ರಮ, ನೃತ್ಯ-ನಾಟಕಗಳಂಥ ಕಲೆಗಳು ಇವೆಲ್ಲವೂ ಇವತ್ತಿಗೆ ಹಿಂದು ಎಂದು ಕರೆಸಿಕೊಳ್ಳುವ ಸನಾತನ ಪದ್ಧತಿಗಳೇ ಆಗಿರಲಿಲ್ಲವೇ?

ಇವತ್ತಿನ ದ್ರಾವಿಡ ರಾಜಕಾರಣದ ಪರಿಭಾಷೆಯಲ್ಲಿ ಮಾತನಾಡುವ ಕಮಲ ಹಾಸನ್ ಥರದವರು ಇಲ್ಲಿ ಮತ್ತೊಂದು ವಿಭಜಕ ವಾದವನ್ನೂ ಹೂಡುತ್ತಾರೇನೋ? ಚೋಳರ ಕಾಲದಲ್ಲಿ ನಿರ್ಮಾಣವಾದವೆಲ್ಲ ಶಿವ ದೇವಾಲಯಗಳು, ಹೀಗಾಗಿ ಇದನ್ನು ಶೈವ ಪಂಥದ ಭಾಗವಾಗಿ ಮಾತ್ರ ನೋಡಬೇಕು ಎಂಬರ್ಥದ ವಾದ ಇವರದ್ದಾಗಿರಬಹುದು. ಶೈವ, ವೈಷ್ಣವ ಸೇರಿದಂತೆ ಎಲ್ಲ ಪಂಥಗಳೂ ಸನಾತನ ಧರ್ಮದ ವಿರಾಟ್ ರೂಪಗಳೇ. ಚೋಳರು ಶಿವನ ಆರಾಧಕರು ಎಂದಾದ ತಕ್ಷಣ ಅವರು ಇನ್ನೇನನ್ನೋ ವಿರೋಧಿಸುತ್ತಿದ್ದರು ಅಥವಾ ಇಸ್ಲಾಂ ದಾಳಿಕೋರರಂತೆ ಉಳಿದವರ ಪೂಜಾಪದ್ಧತಿಗಳನ್ನು ನಾಶಮಾಡಿದ್ದರು ಎಂದೇನೂ ಅಲ್ಲ. ಚೋಳರ ಕಾಲದಲ್ಲಿ ನಿರ್ಮಾಣಗೊಂಡ ಬೃಹತ್ ಶಿವ ದೇವಾಲಯಗಳ ಪ್ರಾಕಾರಗಳಲ್ಲೇ ಬೇರೆ ಬೇರೆ ದೇವಿಯರು ಮತ್ತು ಉಳಿದ ದೇವತೆಗಳ ವಿಗ್ರಹ ಮತ್ತು ಕೆತ್ತನೆಗಳೂ ಇವೆ.
ಹೀಗಿರುವಾಗ ಚೋಳರು ಹಿಂದುಗಳಾಗಿರಲಿಲ್ಲ ಎಂಬ ಕಮಲ್ ಹಾಸನ್ ಮತ್ತವರ ಪಾಳೆಯದ ವಾದಗಳು ಬಾಲಿಶವಲ್ಲದೇ ಇನ್ನೇನು?

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!