ಅಮಿತ್ ಶಾ ಆಗಮನಕ್ಕೆ ಕ್ಷಣಗಣನೆ: ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಭದ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಶಾ ಅವರು ಭಾಗವಹಿಸುವ ಜಿಲ್ಲೆಯ ಈಶ್ವರಮಂಗಲ, ಪುತ್ತೂರು ಮತ್ತು ಮಂಗಳೂರಿನಲ್ಲಿ ಬೆಳಗ್ಗಿನಿಂದಲೇ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಕಾರ್ಯಕ್ರಮ ನಡೆಯುವ ಪ್ರದೇಶಕ್ಕೆ ಖಾಸಗಿ ವಾಹನಗಳ ನಿಷೇಧವಿದ್ದು, ಪೊಲೀಸರು ಆಯಕಟ್ಟಿನ ಪ್ರದೇಶದಲ್ಲಿ ವಾಹನ ತಪಾಸಣೆ ಬಿಗಿಗೊಳಿಸಿದ್ದಾರೆ. ಪುತ್ತೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಿನೆಟ್ ಜಂಕ್ಷನ್ ನಿಂದ ಮುಕ್ರಂಪಾಡಿಯವರೆಗೆ ಸಂಜೆ 5.30ರವರೆಗೆ ಎಲ್ಲಾ ವಾಹನ ಸಂಚಾರ ನಿಷೇಧಿಸಲಾಗಿದ್ದು, ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಪುತ್ತೂರು ತಾಲೂಕಿನಾದ್ಯಂತ ಇಂದು ಮದ್ಯ ಮಾರಾಟ ನಿಷೇದಿಸಿ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.ಆದೇಶ ಹೊರಡಿಸಿದ್ದಾರೆ. ಎಡಿಜಿಪಿ ಅಲೋಕ್‌ಕುಮಾರ್ ಅವರು ನಿನ್ನೆ ಜಿಲ್ಲಾ ಪೊಲೀಸರೊಂದಿಗೆ ವಿಶೇಷ ಸಭೆ ನಡೆಸಿದ್ದು, ಭದ್ರತಾ ಲೋಪವಾಗದಂತೆ ಎಚ್ಚರ ವಹಿಸುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಈಶ್ವರ ಮಂಗಲ ಹಾಗೂ ಪುತ್ತೂರಿನಲ್ಲಿ ಪಶ್ಚಿಮ ವಲಯ ಡಿಐಜಿ ಡಾ.ಚಂದ್ರಗುಪ್ತ ಅವರ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ತಂಡದ ಜತೆಗೆ 11 ಕೆಎಸ್‌ಆರ್‌ಪಿ ತುಕಡಿ, ಒಂದು ಸಾವಿರ ಸಿಬ್ಬಂದಿಯನ್ನು ನೀಯೋಜಿಸಲಾಗಿದೆ. ಜತೆಗೆ ಹೊರಜಿಲ್ಲೆಯ ಎಸ್ಪಿಗಳು, ಡಿವೈಎಸ್‌ಪಿಗಳು ಆಗಮಿಸಿದ್ದು ಪೊಲೀಸ್ ಸರ್ಪಗಾವಲಿನಲ್ಲಿ ಕಾರ್ಯಕ್ರಮಗಳ ನಡೆಯಲಿವೆ. ಮಂಗಳೂರಿನಲ್ಲಿ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಅಮಿತ್ ಶಾ ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕೊಂಚ ಬದಲಾವಣೆಯಾಗಿದೆ. ಇಂದು ಅಪರಾಹ್ನ 2.15ಕ್ಕೆ ಕೇರಳದ ಕಣ್ಣೂರಿಗೆ ಆಗಮಿಸುವ ಅವರು 2.20ಕ್ಕೆ ಹೆಲಿಕಾಪ್ಟರ್ ಮೂಲಕ ಹೊರಟು 2.50ರ ಸುಮಾರಿಗೆ ಪುತ್ತೂರಿನ ಈಶ್ವರಮಂಗಲ ತಲುಪುವರು. 3.15ಕ್ಕೆ ಈಶ್ವರಮಂಗಲ ದೇವಸ್ಥಾನ ಭೇಟಿ ಮಾಡಿ ದೇವರ ದರ್ಶನ ಪಡೆಯುವರು. 3.40ಕ್ಕೆ ಪುತ್ತೂರಿಗೆ ಆಗಮಿಸಿ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಹೆಲಿಕಾಪ್ಟರ್‌ ಮೂಲಕ 5.10 ರ ಸುಮಾರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದಾರೆ. 5.20 ರಿಂದ 8 ಗಂಟೆಯವರೆಗೆ ಮಂಗಳೂರಿನ ಏರ್‌ಪೋರ್ಟ್ ಬಳಿಯ ಕೆಂಜಾರು ಶ್ರೀದೇವಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಬಿಜೆಪಿ ಪ್ರಮುಖರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.

ಮಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಕೋಟ‌ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಸುನಿಲ್ ಕುಮಾರ್, ಎಸ್.ಟಿ.ಸೋಮಶೇಖರ್, ಕರಾವಳಿ ಜಿಲ್ಲೆಗಳ ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷರು, ವಿಭಾಗ ಪ್ರಭಾರಿಗಳು ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!