ವಿಶ್ವಪ್ರಸಿದ್ಧ ಹಂಪಿ ಉತ್ಸವ-2023ಕ್ಕೆ ಕ್ಷಣಗಣನೆ: ಸಿದ್ಧತಾ ಕಾರ್ಯ ಬಹುತೇಕ ಪೂರ್ಣ ಎಂದ ಡಿಸಿ ಟಿ.ವೆಂಕಟೇಶ್

ಹೊಸದಿಗಂತ ವರದಿ,ಬಳ್ಳಾರಿ:

ವಿಶ್ವಪ್ರಸಿದ್ಧ ಹಂಪಿ ಉತ್ಸವಕ್ಕೆ ಸಂಬಂಧಿಸಿದಂತೆ ಮುಖ್ಯ ವೇದಿಕೆ ಸೇರಿದಂತೆ ನಾಲ್ಕು ವೇದಿಕೆಗಳ ಸಿದ್ಧತಾ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ವೇದಿಕೆ ಗಾಯಿತ್ರಿ ಪೀಠದ ಹತ್ತಿರ 100*80 ಅಳತೆಯ ಬೃಹತ್ ವೇದಿಕೆಯನ್ನು ಹೇಮಕೂಟ ಪರ್ವತದ 3ಡಿ ಮಾದರಿಯ ವೇದಿಕೆಯನ್ನು ನಿರ್ಮಿಸಲಾಗಿದೆ. ಉಳಿದ ವೇದಿಕೆಗಳನ್ನು ಕಾರ್ಯಕ್ರಮಕ್ಕೆ ಅನುಗುಣವಾಗಿ ಸಿದ್ದಪಡಿಸಲಾಗಿದೆ.
5 ದಿನದ ಆಚರಣೆ ಸಂಭ್ರಮ:
ಹಂಪಿ ಉತ್ಸವ ನಿಮಿತ್ತ ಒಟ್ಟು 5 ದಿನಗಳ ಕಾಲ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜ.25ರಿಂದ ತುಂಗಭದ್ರ ಆರತಿ ಮಹೋತ್ಸವದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಜ.26 ಸಂಜೆ ಹೊಸಪೇಟೆ ನಗರದಲ್ಲಿ ವಸಂತ ವೈಭವ ಮೆರವಣಿಗೆ ನಡೆಯಲಿದ್ದು, ಇದರಲ್ಲಿ ಸ್ಥಳೀಯ 80 ಕಲಾ ತಂಡಗಳು ಸೇರಿದಂತೆ ಮಂಗಳೂರು, ಆಳ್ವಾಸ್ ಭಾಗದ 100 ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಮೆರವಣಿಗೆಯಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ 2500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಮೆರವಣಿಗೆ ನಗರದ ವಡಕರಾಯ ದೇವಸ್ಥಾನದಿಂದ ಮುನ್ಸಿಪಲ್ ಮೈದಾನದವರೆಗೂ ಸಾಗಿಬರಲಿದೆ. ನಂತರ ಮೈದಾನದಲ್ಲಿ ರಾತ್ರಿ 7.30ರಿಂದ ವಿಶೇಷ ಲೇಸರ್ ಶೋ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜ.27ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವದಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನ, ಕವಿಗೋಷ್ಠಿ, ವಿಚಾರ ಸಂಕಿರಣ ಸೇರಿದಂತೆ ಚಿತ್ರಕಲಾ ಶಿಬಿರ, ಶಿಲ್ಪಕಲಾ ಶಿಬಿರ, ಮರಳುಶಿಲ್ಪಕಲೆ ಪ್ರದರ್ಶನ, ಮತ್ಸ್ಯ ಮೇಳ, ಹಂಪಿ ಬೈ ಸ್ಕೈ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಕೃಷಿ ಕರಕುಶಲ, ಕೈಗಾರಿಕೆ ಹಾಗೂ ಪುಸ್ತಕ ಪ್ರದರ್ಶನ, ಗ್ರಾಮೀಣ ಕ್ರೀಡೆಗಳು, ಸಾಹಸ ಕ್ರೀಡೆಗಳು, ಧ್ವನಿ ಮತ್ತು ಬೆಳಕು, ಜಲ ಕ್ರೀಡೆಗಳು, ಜಾನಪದ ವೈಭವ, ಅಂಗವಿಕಲರಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.

ಪ್ರಖ್ಯಾತ ಕಲಾವಿದರ ದಂಡು: ಕನ್ನಡ ಚಿತ್ರರಂಗದ ಅರ್ಜುನ್ ಜನ್ಯ, ರಘು ದಿಕ್ಷಿತ್, ವಿಜಯ ಪ್ರಕಾಶ್, ಎಂ.ಡಿ.ಪಲ್ಲವಿ, ಅನನ್ಯ ಭಟ್, ಕಲಾವತಿ ದಯಾನಂದ್, ವೈಯಾಲಿ ಫಲೋಕೇರ್ ಬಂಬೂ ಫ್ಯೂಜನ್ ಸೇರಿದಂತೆ ಬಾಲಿವುಡ್‌ನ ಪ್ರಮುಖ ಹಿನ್ನೆಲೆ ಗಾಯಕರಾದ ಕೈಲಾಶ್ ಖೇರ್, ಅರ್ಮಾನ್ ಮಲ್ಲಿಕ್, ಅಂಕಿತ್ ತಿವಾರಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಸಂತ ವೈಭವ, ಜಾನಪದ ವೈಭವ ಹಾಗೂ ಎಲ್ಲ ವೇದಿಕೆ ಕಾರ್ಯಕ್ರಮಗಳಲ್ಲಿ ಒಟ್ಟು 6 ಸಾವಿರ ಕಲಾವಿಧರು ಭಾಗವಹಿಸಲಿದ್ದು, ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ ಎಂದರು.
120 ಉಚಿತ ಬಸ್ ವ್ಯವಸ್ಥೆ: ಎಸ್ಪಿ ಶ್ರೀಹರಿ ಬಾಬು ಅವರು ಮಾತನಾಡಿ, ಹಂಪಿಗೆ ತೆರಳಲು ಕಡ್ಡಿರಾಂಪುರ, ಕಮಲಾಪುರ ಮಾರ್ಗಗಳನ್ನು ಏಕಮುಖ ರಸ್ತೆಯಾಗಿ ಬದಲಿಸಲಾಗಿದ್ದು, ಆಯಾ ಸ್ಥಳಗಳಲ್ಲಿ ಸೂಚಿಸಿರುವ ಪಾರ್ಕಿಂಗ್ ವ್ಯವಸ್ಥೆ ಮೂಲಕ ವೇದಿಕೆಗಳಿಗೆ ತೆರಳಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದಕ್ಕಾಗಿ ಕಲ್ಯಾಣ ಕರ್ನಾಟಕ ಸಾರಿಗೆಯಿಂದ 120 ಬಸ್ ನಿಯೋಜಿಸಲಾಗಿದೆ. ಪ್ರತಿ 5 ನಿಮಿಷಕ್ಕೆ ಬಸ್‌ಗಳು ಸಂಚರಿಸಲಿವೆ ಎಂದರು.  ಹಂಪಿ ಉತ್ಸವಕ್ಕೆ ಆಗಮಿಸಲಿರುವ ಸಾರ್ವಜನಿಕರು ಹಾಗೂ ಪ್ರವಾಸಿಗರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು 45-50 ಎಕರೆ ಜಾಗದಲ್ಲಿ 6 ಸಾವಿರದಷ್ಟು ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!