October 11, 2026
Sunday, October 11, 2026
spot_img

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣನೆ: ಚಾಮುಂಡಿ ಬೆಟ್ಟದಲ್ಲಿ ಸಕಲ ಸಿದ್ಧತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾಂಸ್ಕೃತಿಕ ನಗರಿಯ ಕಲೆ, ಪರಂಪರೆ ಮತ್ತು ಶ್ರದ್ಧಾಭಕ್ತಿಯ ಪ್ರತೀಕವಾಗಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದಿನಿಂದ ಅದ್ಧೂರಿ ಚಾಲನೆ ಸಿಗುತ್ತಿದೆ. ನವರಾತ್ರಿಯ ಮೊದಲ ದಿನವಾದ ಇಂದು ಬೆಳಗ್ಗೆ 11:50 ರಿಂದ 12:13 ರವರೆಗಿ ಶುಭ ಧನುರ್ ಲಗ್ನದಲ್ಲಿ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಜಗನ್ಮಾತೆ ಚಾಮುಂಡೇಶ್ವರಿ ದೇವಿಯ ದಿವ್ಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ.

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರುಗಳು ಸೇರಿದಂತೆ ಹಲವು ಗಣ್ಯರು ಈಗಾಗಲೇ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದಾರೆ. ಉದ್ಘಾಟನೆಗೆ ಕೆಲವೇ ಕ್ಷಣಗಳು ಬಾಕಿ ಇರುವ ಮುನ್ನ ಬೆಟ್ಟದ ತುಂಬೆಲ್ಲಾ ಮಂತ್ರಘೋಷಗಳು ಮೊಳಗುತ್ತಿದ್ದು, ಗವಿಸಿದ್ದೇಶ್ವರ ಶ್ರೀಗಳಿಗೆ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ ಕೋರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇಂದು ಸಂಜೆ ಮೈಸೂರು ಅರಮನೆಯ ಭವ್ಯ ಆವರಣದಲ್ಲಿ ಸಾಂಸ್ಕೃತಿಕ ವೇದಿಕೆಯ ಕಾರ್ಯಕ್ರಮಗಳು ಆರಂಭವಾಗಲಿದೆ. ಇದರ ಜೊತೆಗೆ ಮೈಸೂರಿನ ಪ್ರವಾಸಿಗರ ನೆಚ್ಚಿನ ತಾಣವಾದ ಕುಪ್ಪಣ್ಣ ಪಾರ್ಕ್‌ನಲ್ಲಿ ಅದ್ಭುತ ಫಲಪುಷ್ಪ ಪ್ರದರ್ಶನ ಲೋಕಾರ್ಪಣೆಯಾಗಲಿದೆ. ಆಹಾರ ಪ್ರಿಯರಿಗಾಗಿ ಆಹಾರ ಮೇಳ, ಜ್ಞಾನದ ಹಸಿವು ನೀಗಿಸಲು ಪುಸ್ತಕ ಮೇಳ ಹಾಗೂ ಕೈಗಾರಿಕಾ ವಸ್ತುಪ್ರದರ್ಶನಗಳು ಇಂದಿನಿಂದಲೇ ಸಾರ್ವಜನಿಕರಿಗೆ ಮುಕ್ತವಾಗಲಿವೆ.

ಕಣ್ಮನಸೆಳೆಯುವ 10 ದಿನಗಳ ಕಾರ್ಯಕ್ರಮಗಳು

ಅಕ್ಟೋಬರ್ 11 (ಇಂದು): ಚಾಮುಂಡಿ ಬೆಟ್ಟದಲ್ಲಿ ಹಬ್ಬದ ಅಧಿಕೃತ ಉದ್ಘಾಟನೆ, ದಸರಾ ವಿಶೇಷ ಪೂಜೆ ಹಾಗೂ ಸಂಜೆ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆರಂಭ.

ಅಕ್ಟೋಬರ್ 12 ರಿಂದ 20: ಮಹಾರಾಜ ಕಾಲೇಜು ಮೈದಾನ ಹಾಗೂ ಅರಮನೆಯ ಇಕ್ಕೆಲಗಳಲ್ಲಿ ದೇಶದ ಯುವ ಸಮೂಹವನ್ನು ಸೆಳೆಯುವ ‘ಯುವ ದಸರಾ’ ಹಾಗೂ ನೃತ್ಯ, ನಾಟಕ, ಸಂಗೀತ ಒಳಗೊಂಡ ವೈವಿಧ್ಯಮಯ ಸಾಂಸ್ಕೃತಿಕ ಸಂಜೆ.

ಅಕ್ಟೋಬರ್ 17, 18, 20, 21: ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ದಸರಾದ ಇತಿಹಾಸದಲ್ಲೇ ಅತ್ಯಂತ ರೋಮಾಂಚನಕಾರಿಯಾಗಿ ಮೂಡಿಬರಲಿರುವ ಆಕರ್ಷಕ ‘ಡ್ರೋನ್ ಶೋ’.

ಅಕ್ಟೋಬರ್ 20: ದುರ್ಗಾದೇವಿಯ ಆರಾಧನೆಯ ಮಹಾನವಮಿ ಹಾಗೂ ಸಕಲ ಆಯುಧಗಳಿಗೆ ಪೂಜೆ ಸಲ್ಲಿಸುವ ಆಯುಧ ಪೂಜೆಯ ಸಡಗರ.

ಅಕ್ಟೋಬರ್ 21: ದಸರಾ ಮಹೋತ್ಸವದ ಮಹಾ ಕ್ಲೈಮ್ಯಾಕ್ಸ್ ಆಗಿರುವ ವಿಜಯದಶಮಿ ಜಂಬೂಸವಾರಿ ಮೆರವಣಿಗೆ ಮತ್ತು ರಾತ್ರಿ ಬನ್ನಿಮಂಟಪದಲ್ಲಿ ಅದ್ಭುತ ಪಂಜಿನ ಕವಾಯತು.

ವಿಶ್ವವಿಖ್ಯಾತ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಈಗಾಗಲೇ ದೇಶ-ವಿದೇಶಗಳಿಂದ ಪ್ರವಾಸಿಗರು ಸಾಂಸ್ಕೃತಿಕ ನಗರಿಗೆ ಹರಿದುಬರುತ್ತಿದ್ದು, ನಗರದಾದ್ಯಂತ ಸುರಕ್ಷತೆ ಮತ್ತು ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

Must Read