ಒಂದೂರಿನಲ್ಲಿ ತಾಯಿ ಮಗ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಇದ್ದಕ್ಕಿದ್ದಂತೆಯೇ ಒಂದು ದಿನ ತಾಯಿಗೆ ಅನಾರೋಗ್ಯ ಕಾಡಿತ್ತು. ಏನಾಗ್ತಿದೆ? ಯಾಕೆ ಸಮಸ್ಯೆ ಬರ್ತಿದೆ ಎಂದು ಮಗನಿಗೆ ಗೊತ್ತಾಗಲೇ ಇಲ್ಲ. ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೆ ಅಲೆದ ನಂತರ ತಾಯಿ ಕೊನೆಯುಸಿರೆಳೆದಿದ್ದರು. ಮಗನ ಇಡೀ ಲೋಕವೇ ತಲೆಕೆಳಗಾಯ್ತು!
ಇದಕ್ಕೆಲ್ಲಾ ಕಾರಣ ಕಲುಷಿತ ನೀರಿನ ಸೇವನೆ! ಹೌದು, ಕಲುಷಿತ ನೀರಿಗೆ ತಾಯಿಯನ್ನು ಕಳೆದುಕೊಂಡ ಮಗ ಖಿನ್ನತೆಯಿಂದ ಮನೆಯಲ್ಲಿ ಕೂರದೇ ಮತ್ಯಾರೂ ತಾಯಿಯ ರೀತಿ ಆಗದಂತೆ ಇರೋದಕ್ಕೆ ಶ್ರಮಿಸುತ್ತಿದ್ದಾರೆ. ಕಡೆಯ ಉಸಿರು ಇರುವವರೆಗೂ ಜನರ ಸೇವೆಗೆ ಮುಡಿಪಾಗಿದ್ದಾರೆ..

ಉತ್ತರ ಪ್ರದೇಶದ ಘನಶ್ಯಾಮ್ ಮೌರ್ಯ ಎಂಬಾತ 2015 ರಲ್ಲಿ ಇವರ ತಾಯಿ ಕಲುಷಿತ ಹಳದಿ ನೀರನ್ನು ಸೇವಿಸಿ ತೀವ್ರ ರಕ್ತಹೀನತೆಯಿಂದ ಬಳಲಿದರು. ಚಿಕಿತ್ಸೆಗಾಗಿ 1.5 ಲಕ್ಷ ಖರ್ಚು ಮಾಡಿದರೂ ಫಲಕಾರಿಯಾಗದೆ 2017 ರಲ್ಲಿ ಅವರು ಮರಣ ಹೊಂದಿದರು. ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಘನಶ್ಯಾಮ್, ತಮ್ಮ ಗ್ರಾಮದ ಇತರರು ಕಲುಷಿತ ನೀರಿನಿಂದ ಸಾಯಬಾರದು ಎಂದು ದೃಢ ನಿರ್ಧಾರ ಮಾಡಿದರು. ಬೋರ್‌ವೆಲ್ ಅಥವಾ ಫಿಲ್ಟರ್ ಪ್ಲಾಂಟ್ ಹಾಕಿಸಲು ಹಣವಿಲ್ಲದಿದ್ದರೂ, ಸಾಲ ಮಾಡಿ ಒಂದು ಮಣ್ಣಿನ ಮಡಕೆಯೊಂದಿಗೆ ಶುದ್ಧ ನೀರಿನ ಸೇವೆಯನ್ನು ಆರಂಭಿಸಿದರು.
ಪ್ರತಿ ಬೇಸಿಗೆಯ 4 ತಿಂಗಳುಗಳ ಕಾಲ, ಪ್ರತಿದಿನ ಮುಂಜಾನೆ 4 ಗಂಟೆಗೆ ಎದ್ದು ಕೆಲಸಗಾರರು, ಬರಿಗಾಲಿನ ಪ್ರಯಾಣಿಕರು ಮತ್ತು ರೋಗಿಗಳಿಗಾಗಿ ರಸ್ತೆ ಬದಿಗಳಲ್ಲಿ ಮಣ್ಣಿನ ಮಡಕೆಗಳನ್ನು ಇಟ್ಟು ಶುದ್ಧ ನೀರು ತುಂಬಿಸುತ್ತಾರೆ. ನೀರು ಮಾತ್ರವಲ್ಲದೆ ಬಿಸಿಲಿನಿಂದ ರಕ್ಷಿಸಲು ಟವೆಲ್, ಬರಿಗಾಲಿನವರಿಗೆ ಚಪ್ಪಲಿ ಹಾಗೂ ಹಸಿದವರಿಗೆ ಬಿಸ್ಕತ್‌ಗಳನ್ನು ನೀಡುತ್ತಾ ಸ್ಥಳೀಯರಿಂದ ಪ್ರೀತಿಯಿಂದ ‘ಮಟ್ಕಾ ಮ್ಯಾನ್’ ಎಂದು ಕರೆಸಿಕೊಳ್ಳುತ್ತಿದ್ದಾರೆ.
ಉತ್ತರ ಪ್ರದೇಶದ ಮಿರ್ಜಾಪುರದ ‘ಮಟ್ಕಾ ಮ್ಯಾನ್’ ಘನಶ್ಯಾಮ್ ಮೌರ್ಯ ಮುಂಜಾನೆ ತುಂಬಿದ ಟ್ಯಾಂಕ್ ತೆಗೆದುಕೊಂಡು ಬಸ್ ನಿಲ್ದಾಣ, ಮಾರುಕಟ್ಟೆ, ಆಸ್ಪತ್ರೆ ಹಾಗೂ ದಿನಗೂಲಿ ಕಾರ್ಮಿಕರು ಸೇರುವ ಜಾಗಗಳಿಗೆ ತೆರಳಿ, ಅಲ್ಲಿ ಇಟ್ಟಿರುವ ಮಡಕೆಗಳಿಗೆ ನೀರು ತುಂಬಿಸುತ್ತಾರೆ. ಖಾಲಿಯಾದಂತೆ ದಿನಕ್ಕೆ 2-3 ಬಾರಿ ಮರುಪೂರಣ ಮಾಡುತ್ತಾರೆ. ದಿನವೊಂದಕ್ಕೆ ಸುಮಾರು 1,000 ಲೀಟರ್ ಶುದ್ಧ ನೀರನ್ನು ವಿತರಿಸುತ್ತಾರೆ.

ಅಹ್ರೌರಾ ಮಾರುಕಟ್ಟೆಯ ಕೆಲವು ಆರ್.ಒ (RO) ನೀರಿನ ಯಂತ್ರ ಹೊಂದಿರುವ ಅಂಗಡಿಯವರು ಘನಶ್ಯಾಮ್ ನಿಸ್ವಾರ್ಥ ಸೇವೆಯನ್ನು ಕಂಡು ಉಚಿತವಾಗಿ 500 ಲೀಟರ್ ಟ್ಯಾಂಕ್ ತುಂಬಿಸಿಕೊಡುತ್ತಾರೆ ಹಿಂದೆ ಇ-ರಿಕ್ಷಾ ಇದ್ದಾಗ ದಿನಕ್ಕೆ 70 ರಿಂದ 100 ಕಿ.ಮೀ ಸಂಚರಿಸುತ್ತಿದ್ದರು. ಈಗ ಕೈಗಾಡಿಯಿಂದಾಗಿ ಕೇವಲ 15 ರಿಂದ 20 ಕಿ.ಮೀ ಮಾತ್ರ ಕ್ರಮಿಸಲು ಸಾಧ್ಯವಾಗುತ್ತಿದ್ದು, ದೂರದ ಬುಡಕಟ್ಟು ಹಳ್ಳಿಗಳಿಗೆ ನೀರು ತಲುಪುತ್ತಿಲ್ಲ.
ಘನಶ್ಯಾಮ್ ಮತ್ತು ಶಶಿ ಲತಾ ದಂಪತಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳಿದ್ದಾಳೆ. ಇಬ್ಬರ ಬಳಿಯೂ ಸರ್ಕಾರಿ ಉದ್ಯೋಗ ಕಾರ್ಡ್‌ಗಳಿದ್ದರೂ ಯಾವುದೇ ಖಾಯಂ ಕೆಲಸವಿಲ್ಲ. ವರ್ಷದ ಉಳಿದ ದಿನಗಳಲ್ಲಿ ಕೂಲಿ ಕೆಲಸ ಮಾಡುತ್ತಾರೆ. ತಮಗೆ ಯಾವುದೇ ಉಳಿತಾಯ ಅಥವಾ ಸ್ವಂತ ವ್ಯಾಪಾರ ಇಲ್ಲದಿದ್ದರೂ, ಬೇಸಿಗೆಯ ಅತ್ಯಂತ ಕಠಿಣವಾದ 4 ತಿಂಗಳುಗಳನ್ನು ಸಂಪೂರ್ಣವಾಗಿ ಜನರ ಸೇವೆಗಾಗಿಯೇ ಮುಡುಪಾಗಿಡುತ್ತಾರೆ. ಕೂಲಿ ಕೆಲಸದಿಂದ ಗಳಿಸಿದ ಅಲ್ಪ ಹಣವನ್ನೇ ಮಡಕೆ ಹಾಗೂ ನೀರಿನ ವ್ಯವಸ್ಥೆಗೆ ಬಳಸುತ್ತಾರೆ



