ಬೀದಿ ಬದಿಯ ವ್ಯಾಪಾರಸ್ಥರ ಸ್ಥಳಾಂತರಕ್ಕೆ ಕೋರ್ಟ್ ತಡೆ

ಹೊಸದಿಗಂತ ವರದಿ ಸಕಲೇಶಪುರ:

ಬೀದಿ ಬದಿಯ ವ್ಯಾಪಾರಿಗಳ ಸ್ಥಳಾಂತರಕ್ಕೆ ನ್ಯಾಯಾಲಯ ತಡೆ ನೀಡಿದ್ದು, ಮಾನವ ಹಕ್ಕುಗಳ ರಕ್ಷಣಾ ಸಮಿತಿ ಹಾಗೂ ಬೀದಿ ವ್ಯಾಪಾರಿಗಳಲ್ಲಿ ಸಂತಸ ವ್ಯಕ್ತಪಡಿಸಿದರು.

ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಹಲವಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ವ್ಯಾಪಾರಿಗಳಿಗೆ ನ್ಯಾಯಾಲಯದ ಆದೇಶ ನೆಮ್ಮದಿ ತಂದಿದೆ. ‌ಬೀದಿ ಬದಿಯ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳವನ್ನು ಒದಗಿಸದೆ ಅವರನ್ನು ಅಲ್ಲಿಂದ ಹೊರಕಳಿಸಲು ಮುಂದಾಗಿದ್ದ ಪುರಸಭೆಯ ನಡೆಯಿಂದ ಕಂಗಲಾಗಿದ್ದರು.

ಬೀದಿ ಬದಿಯ ವ್ಯಾಪಾರಿಗಳ ಕಾಯಿದೆ 2014 ರಲ್ಲಿ ನೀಡಿರುವ ನಮ್ಮ ಹಕ್ಕನ್ನು ರಕ್ಷಿಸುವಂತೆ ಸಕಲೇಶಪುರ ಸಿವಿಲ್ ನ್ಯಾಯಾಲಯದ ವ್ಯಾಪಾರಿಗಳು ಮೊರೆ ಹೋಗಿದ್ದರು. ವ್ಯಾಪಾರಿಗಳ ಹಕ್ಕನ್ನು ರಕ್ಷಿಸಿದ ನ್ಯಾಯಾಲಯ ಮುಂದಿನ ಆದೇಶದವರೆಗೂ ಬೀದಿ ಬದಿಯ ವ್ಯಾಪಾರಿಗಳನ್ನು ಪುರಸಭೆಯು ಸ್ಥಳಾಂತರ ಮಾಡದಂತೆಯು ಹಾಗೂ ಅವರ ವ್ಯಾಪಾರಕ್ಕೆ ಯಾವುದೇ ರೀತಿಯ ಅಡಚಣೆ ಉಂಟು ಮಾಡದಂತೆ ಆದೇಶಿದೆ.

ವ್ಯಾಪಾರಿಗಳ ಪರವಾಗಿ ಮಾನವ ಹಕ್ಕುಗಳ ಹೋರಾಟ ಸಮಿತಿಯ ಕಾನೂನು ಸಲಹೆಗಾರರಾದ ವಕೀಲ ಪ್ರದೀಪ್ ರವರು ವಾದ ಮಂಡಿಸಿದ್ದರು. ನ್ಯಾಯಾಲಯದ ಆದೇಶವನ್ನು ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷರಾದ ಜೀವನ್, ತಾಲೂಕು ಅಧ್ಯಕ್ಷ ವಿಜಯಕುಮಾರ್ ಹಾಗೂ ಕಸಬಾಧ್ಯಕ್ಷರಾದ ಬಾಲರಾಜ್ ಮತ್ತು ಪದಾಧಿಕಾರಿಗಳು ಸ್ವಾಗತಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!