Tuesday, February 7, 2023

Latest Posts

ಮ್ಯಾಂಚೆಸ್ಟರ್‌ ಬಿಟ್ಟ ರೊನಾಲ್ಡೋಗೆ 3 ವರ್ಷಕ್ಕೆ 1800 ಕೋಟಿ ರೂ.ಗಳ ಬಿಗ್ ಆಫರ್ ಕೊಟ್ಟ ಸೌದಿ ಕ್ಲಬ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಫುಟ್ಬಾಲ್ ದಿಗ್ಗಜ ಕ್ರಿಶ್ಚಿಯಾನೋ ರೊನಾಲ್ಡೋ ಇತ್ತೀಚೆಗೆ ಇಂಗ್ಲಿಷ್ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಜೊತೆಗೆ ಕಿತ್ತಾಡಿಕೊಂಡಿದ್ದು ದೊಡ್ಡ ವಿವಾದವಾಗಿ ಮಾರ್ಪಟ್ಟಿತ್ತು. ಆ ಬಳಿಕ ರೊನಾಲ್ಡೊ ಪರಸ್ಪರ ಒಪ್ಪಿಗೆಯ ಮೇರೆಗೆ ಕ್ಲಬ್​ನಿಂದ ಹೊರಬಂದಿದ್ದರು. ಆ ಬಳಿಕ ಮುಂದೇನು ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡಿತ್ತು. ಈ ನಡುವೆ ಸೌದಿ ಅರೇಬಿಯಾದ ಕ್ಲಬ್​ವೊಂದು ರೊನಾಲ್ಡೊ ಜೊತೆಗೆ ಬೃಹತ್‌ ಮೊತ್ತದ ಒಪ್ಪಂದಕ್ಕೆ ಮುಂದಾಗಿದ್ದು ರೋನಾಲ್ಡೋ ತಾರಾವರ್ಚಸ್ಸು ಒಂದಿನಿತೂ ಕಡಿಮೆಯಾಗಿಲ್ಲ ಎಂಬುದು ಸಾಬೀತಾಗಿದೆ.
ಈ ವಾರದ ಆರಂಭದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಜೊತೆಗಿನ ತನ್ನ ಒಪ್ಪಂದವನ್ನು ಮುಕ್ತಾಯಗೊಳಿಸಿರುವ ರೊನಾಲ್ಡೊಗೆ ಸೌದಿ ಅರೇಬಿಯಾದ ದೈತ್ಯ ಫುಟ್ಬಾಲ್‌ ಕ್ಲಬ್ ಅಲ್ ನಾಸ್ರ್ ಬಿಗ್‌ ಆಫರ್‌ ನೀಡಿದೆ.
37 ವರ್ಷದ ಫುಟ್‌ಬಾಲ್ ದಂತಕಥೆ ರೊನಾಲ್ಡೊಗೆ ವಿಶ್ವಕಪ್ ನಂತರ ತನ್ನಲ್ಲಿ ಆಡಲು ಸೌದಿ ಕ್ಲಬ್ ಮೂರು ವರ್ಷಗಳ ಅವಧಿಗೆ ಜೊತೆ 225 ಮಿಲಿಯನ್ ಅಂದರೆ ಸುಮಾರು 18.37 ಶತಕೋಟಿ ರೂ.ಗಳ ಒಪ್ಪಂದಕ್ಕೆ ಮುಂದಾಗಿದೆ ಎಂಬ ಸುದ್ದಿಯೀಗ ಫುಟ್ಬಾಲ್‌ ಜಗತ್ತಿನಲ್ಲಿ ಸಂಚಲನ ಸೃಷ್ಟಿಸುತ್ತಿದೆ.
ವರದಿಗಳ ಪ್ರಕಾರ, ಪ್ರಸ್ತುತ ತಮ್ಮ ಐದನೇ ವಿಶ್ವಕಪ್‌ನಲ್ಲಿ ಆಡುತ್ತಿರುವ ರೊನಾಲ್ಡೊ, ಅಲ್ ನಾಸ್ರ್‌ ಆಫರ್‌ ಬಗ್ಗೆ ಆಸಕ್ತಿ ತೋರಿದ್ದಾರೆ ಎನ್ನಲಾಗುತ್ತಿದೆ. ಎರಡು ಕಡೆಯವರು ಪರಸ್ಪರ ಸಂಪರ್ಕದಲ್ಲಿದ್ದು, ಮಾತುಕತೆಗಳು ತುಲನಾತ್ಮಕವಾಗಿ ಮುಂದುವರಿದಿವೆ. ರೊನಾಲ್ಡೋ ಅವರ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿವೆ. ರೊನಾಲ್ಡೊ ಈ ಪ್ರಸ್ತಾಪವನ್ನು ಸ್ವೀಕರಿಸಲು ನಿರ್ಧರಿಸಿದರೆ, ಒಪ್ಪಂದವು ಅಂತಿಮಗೊಳ್ಳಲಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಗಮನಾರ್ಹವಾಗಿ, ಅಲ್ ನಾಸ್ರ್ ಏಷ್ಯಾದ ಅತ್ಯಂತ ಯಶಸ್ವಿ ಕ್ಲಬ್‌ಗಳಲ್ಲಿ ಒಂದಾಗಿದೆ. ಒಂಬತ್ತು ಲೀಗ್ ಪ್ರಶಸ್ತಿಗಳನ್ನು ಗೆದ್ದಿದೆ. ಮತ್ತೊಂದೆಡೆ, ಕ್ರಿಸ್ಟಿಯಾನೊ ರೊನಾಲ್ಡೊ ಅವರು ಗುರುವಾರ ಘಾನಾ ವಿರುದ್ಧ ಪೋರ್ಚುಗಲ್‌ನ ವಿಶ್ವಕಪ್ ಘರ್ಷಣೆಯಲ್ಲಿ ಗೊಲು ದಾಖಲಿಸುವ ಮೂಲಕ  ಐದು ವಿಭಿನ್ನ ಫಿಫಾ ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಮೊದಲ ಫುಟ್‌ಬಾಲ್ ಆಟಗಾರ ಎಂಬ ಐತಿಹಾಸಿಕ ದಾಖಲೆಗೆ ಭಾಜನರಾಗಿದ್ದಾರೆ.
ಅಂತರಾಷ್ಟ್ರೀಯ ಪುರುಷರ ಫುಟ್ಬಾಲ್‌ ನಲ್ಲಿ ಸಾರ್ವಕಾಲಿಕ ದಾಖಲೆಯ ಅತಿಹೆಚ್ಚು ಗೋಲುಗಳಿಸಿರುವ ಆಟಗಾರ ಎಂಬ ಖ್ಯಾತಿಯೂ ರೊನಾಲ್ಡೊ ಬೆನ್ನಿಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!