ಅಂಜನಾದ್ರಿ ಬೆಟ್ಟದಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ: ಮುತಾಲಿಕ್ ಒತ್ತಾಯ

ಹೊಸದಿಗಂತ ವರದಿ,ವಿಜಯನಗರ:

ಶ್ರೀ ಹನುಮನ ಪವಿತ್ರ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟದ ಪ್ರದೇಶದ ನಾನಾ ಕಡೆ ಡ್ರಗ್ಸ್ ಮಾಫಿಯಾ, ಸೆಕ್ಸ್ ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿದ್ದು, ಕೂಡಲೇ ಸರ್ಕಾರ ಇದಕ್ಕೆ ಕಡಿವಾಣ ಹಾಕಿ ಸ್ಥಳದ ಪಾವಿತ್ರತೆ ಕಾಪಾಡಬೇಕು ಎಂದು ಶ್ರೀರಾಮ ಸೇನೆ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ವ್ಯಾಪ್ತಿಯ ಆನೆಂಗುಂದಿ ಸೇರಿ ನಾನಾ ಕಡೆ ಐಷಾರಾಮಿ ರೆಸಾರ್ಟ್ ಗಳು ತಲೆ ಎತ್ತಿದ್ದು, ಡ್ರಗ್ಸ್ ವ್ಯವಹಾರ ನಿರಂತರವಾಗಿ ನಡೆಯುತ್ತಿದೆ, ಕೂಡಲೇ ಈ ಮಾಫಿಯಾಯನ್ನು ತೊಲಗಿಸಬೇಕು, ರೆಸಾರ್ಟ್ ಗಳನ್ನು ತೆರೆವುಗೊಳಿಸಬೇಕು, ಹನುಮನ ಜನ್ಮಸ್ಥಳ ಹಾಗೂ ಪಂಪಾ ಕ್ಷೇತ್ರದ ಪಾವಿತ್ರತೆಯನ್ನು ಉಳಿಸಬೇಕು, ನಿರ್ಲಕ್ಷ್ಯ ವಹಿಸಿದರೇ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಶ್ರೀರಾಮನ ಜನ್ಮಸ್ಥಳದಂತೆ ಹನುಮನ ಜನ್ಮಸ್ಥಳವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿರುವುದು ಸಂತಸ‌ ಮೂಡಿಸಿದೆ, ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವೆ. ಶ್ರೀರಾಮನ ಜನ್ಮಸ್ಥಳ ಹಾಗೂ ಶ್ರೀ ಹನುಮನ ಜನ್ಮಸ್ಥಳಕ್ಕೆ ನೇರವಾಗಿ ರೈಲ್ವೆ ಸೌಲಭ್ಯ ಕಲ್ಪಿಸಬೇಕು, ಇದರಿಂದ ಅತ್ಯಂತ ಭಾವನಾತ್ಮಕ ಸಂಬಂಧ ಕಲ್ಪಿಸಿದಂತಾಗಲಿದೆ, ಕೇಂದ್ರ ಸರ್ಕಾರ ಕೂಡಲೇ ಈ ಕೆಲಸವನ್ನು ಕಾರ್ಯಾರಂಭ ಮಾಡಬೇಕು ಎಂದು ಒತ್ತಾಯಿಸಿದರು. ಮುಂಬರುವ 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಹಿಂದುತ್ವದ ಹೋರಾಟಗಾರರಿಗೆ, ಪ್ರಾಮಾಣಿಕರಿಗೆ ಬಿಜೆಪಿಯಿಂದ 25 ಜನರಿಗೆ ಟಿಕೇಟ್ ನೀಡಬೇಕು, ಈ ಕುರಿತು ಈಗಾಗಲೇ ಪಕ್ಷದ ಹಿರೀಯರ ಗಮನಕ್ಕೆ ತಂದಿರುವೆ, ಮಹಿಳೆಯರಿಗೆ ಮಿಸಲಾತಿ, ಶಿಕ್ಷಕರಿಗೆ ಮೀಸಲಾತಿ, ಎಸ್ಸಿ, ಎಸ್ಟಿ ಅವರಿಗೆ ಮೀಸಲಾತಿ ಕಲ್ಪಿಸಿದಂತೆ ಹಿಂದೂಗಳಿಗೆ ರಾಜ್ಯದಲ್ಲಿ 25 ಕ್ಷೇತ್ರಗಳಿಗೆ ಟಿಕೇಟ್ ಮೀಸಲಿಡಬೇಕು, ನಾನೂ ಒಬ್ಬ ಟಿಕೇಟ್ ಆಕಾಂಕ್ಷಿ, ಎಲ್ಲಿ ಸ್ಪರ್ಧಿಸಬೇಕೋ ಎನ್ನುವುದು ನಿರ್ಧಾರವಾಗಿಲ್ಲ, 3-4ಕ್ಷೇತ್ರಗಳಿದ್ದು, ಶೀಘ್ರದಲ್ಲೇ ತಿಳಿಸಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!